Aland | ಆ.31ರಂದು ಖಜೂರಿಯಿಂದ ಆಳಂದವರೆಗೆ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಬೃಹತ್ ಪಾದಯಾತ್ರೆ: ಸುಭಾಷ ಗುತ್ತೇದಾರ
ಆಳಂದ: ರೈತರ ಸಮಸ್ಯೆಗಳು ಹಾಗೂ ಬೆಳೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.31ರಂದು ಖಜೂರಿಯಿಂದ ಆಳಂದವರೆಗೆ ಬಿಜೆಪಿ ಮಂಡಳದ ವತಿಯಿಂದ ಸಾವಿರಾರು ರೈತರೊಂದಿಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ತಿಳಿಸಿದ್ದಾರೆ.
ಶನಿವಾರ ಆಳಂದ ಪಟ್ಟಣದ ಸ್ವ-ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2025-26ನೇ ಸಾಲಿನಲ್ಲಿ 73 ಸಾವಿರಕ್ಕೂ ಹೆಚ್ಚು ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, ಎರಡನೇ ಕಂತಿನ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು. 16 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಬಾಕಿ ಇರುವ ಬೆಳೆ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರು ಹಾಗೂ ಸಾರ್ವಜನಿಕರನ್ನು ಹೆದರಿಸುವ ತಂತ್ರ ಅನುಸರಿಸಬಾರದು. ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ಕಾರ್ಯನಿರ್ವಹಿಸದೆ ಕಾನೂನುಬದ್ಧವಾಗಿ ಹಾಗೂ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮಾದನಹಿಪ್ಪರಗಾ ಪಿಎಸ್‌ಐ ಅವರಿಗೆ ಎಚ್ಚರಿಕೆ ನೀಡಿದರು.
ಆಳಂದ ರಸ್ತೆ ಅಗಲೀಕರಣ ಕಾಮಗಾರಿ, ಸರಸಂಬಾ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಹಾಗೂ ಭೋರಿ ನದಿಯಿಂದ ಆಮರ್ಜಾಕ್ಕೆ ನಡೆಯುತ್ತಿರುವ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯ ಬಗ್ಗೆಯೂ ಸುಭಾಷ ಗುತ್ತೇದಾರ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಸಿದ್ದು ಹಿರೋಳ್ಳಿ ಹಾಗೂ ನಾಗರಾಜ ಶೇಗಜಿ ಉಪಸ್ಥಿತರಿದ್ದರು.