ಕಲಬುರಗಿ | ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಮತ್ತೊಂದು ಎಫ್ಐಆರ್
ಕಲಬುರಗಿ: ಜೀವ ಬೆದರಿಕೆಯೊಡ್ಡಿರುವ ಆರೋಪದ ಮೇರೆಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಇಲ್ಲಿನ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಭೀಮ ಜೈ ಸಂವಿಧಾನ ಬಚಾವೋ ಸಂಘಟನೆಯ ಅಧ್ಯಕ್ಷ ಅಧ್ಯಕ್ಷ ರಾಮು ರಾಠೋಡ್ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ನನಗೂ ಹಾಗೂ ಗುತ್ತಿಗೆದಾರ ಪ್ರಭು ರಾವೂರ ಮಧ್ಯೆ ತಕರಾರಿದ್ದು, ಈ ಕುರಿತು ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆ. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕೋರ್ಟ್ ಗೆ ಹಾಜರಾಗಲು ಹೋಗಿದ್ದೆ, ಇದೇ ವೇಳೆಯಲ್ಲಿ ಪ್ರಭು ರಾವೂರ ಪರವಾಗಿ ಬಂದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಅವಾಚ್ಯ ಶಬ್ದಗಳಿಂದ ನನಗೆ ನಿಂದಿಸಿದ್ದಾನೆ ಮತ್ತು ಜೀವ ಬೆದರಿಕೆಯೊಡ್ಡಿದ್ದಾನೆ. ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು' ದೂರಿನಲ್ಲಿ ರಾಮು ರಾಠೋಡ್ ಒತ್ತಾಯಿಸಿದ್ದರು.
ಇತ್ತೀಚೆಗಷ್ಟೇ ಕೊಲೆ ಯತ್ನದ ಆರೋಪದ ಮೇರೆಗೆ ಮಣಿಕಂಠ ರಾಠೋಡ್ ವಿರುದ್ಧ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.