Chincholi | ರಕ್ತದಾನ ಸಾವಿನಂಚಿನಲ್ಲಿರುವವರಿಗೆ ಮರುಜನ್ಮ ನೀಡುವ ಮಹತ್ವದ ಕೊಡುಗೆ : ಡಾ.ದೀಪಕ್ ರಾಠೋಡ್
ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ಶಿಬಿರ
ಚಿಂಚೋಳಿ: ಒಬ್ಬ ವ್ಯಕ್ತಿ ನೀಡುವ ರಕ್ತ ಮತ್ತೊಬ್ಬರ ಅಮೂಲ್ಯ ಜೀವವನ್ನು ಉಳಿಸಬಲ್ಲದು. ಹೀಗಾಗಿ ರಕ್ತದಾನ ಕೇವಲ ಸಾಮಾನ್ಯ ದಾನವಲ್ಲ, ಸಾವಿನಂಚಿನಲ್ಲಿರುವ ವ್ಯಕ್ತಿಗೆ ಮರುಜನ್ಮ ನೀಡುವ ಮಹತ್ವದ ಕೊಡುಗೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರಾಠೋಡ್ ಹೇಳಿದರು.
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ಶಿಬಿರದ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ರಕ್ತದಾನ ಮಹಾದಾನ, ರಕ್ತ ನೀಡಿ ಜೀವ ಉಳಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ನಿರ್ದೇಶನದ ಮೇರೆಗೆ ಶಿಬಿರ ಆಯೋಜಿಸಲಾಗಿತ್ತು. ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಡೆದ ಶಿಬಿರದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಡಾ. ಅಭಿಷೇಕ, ಸಂದೀಪ್ ಖರ್ಗೆ, ಮಹೇಶ್ವರ ಮೋರೆ, ನಾರಾಯಣ, ಪ್ರಕಾಶ ಗೌನಳ್ಳಿ, ಶರಣಯ್ಯ ಗುತ್ತೇದಾರ್, ಕಲ್ಪನಾ, ಕಿರಣ್, ನರೇಶ್, ಯಾಕೂಬ್ ಅಲಿ, ಮಹಮದ್ ಆಸೀಫ್, ಸವಿತಾ, ರಮೇಶ್ ಸೇರಿದಂತೆ ತಾಲೂಕು ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.