Kalaburagi | ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆಗೆ ನಾಟಕಗಳು ಪರಿಣಾಮಕಾರಿ ಮಾಧ್ಯಮ: ಡಾ.ದತ್ತಾತ್ರೇಯ ಇಕ್ಕಳಕಿ
ಕಲಬುರಗಿ : ಕಲುಷಿತಗೊಳ್ಳುತ್ತಿರುವ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳನ್ನು ಉತ್ತೇಜಿಸಿ, ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರಲು ನಾಟಕಗಳು ಪರಿಣಾಮಕಾರಿ ಮಾಧ್ಯಮಗಳಾಗಿವೆ ಎಂದು ಕಲಬುರಗಿ ಸಮುದಾಯದ ಅಧ್ಯಕ್ಷ ಡಾ. ದತ್ತಾತ್ರೇಯ ಇಕ್ಕಳಕಿ ಹೇಳಿದರು.
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಬುರಗಿ ಆರ್ಟ್ ಥಿಯೇಟರ್, ಸೂರ್ಯನಗರಿ ಸಂಸ್ಕೃತಿ ಕಲಾ ಸಂಘ, ಪಂಚಶೀಲ ಸೇವಾ ಟ್ರಸ್ಟ್, ಸಂಸ್ಕಾರ ಪ್ರತಿಷ್ಠಾನ ಮತ್ತು ಜನಪ್ರಿಯ ಸಾಂಸ್ಕೃತಿಕ ಕಲಾ ಸಂಘಗಳ ಸಂಯುಕ್ತಾಶ್ರಯದಲ್ಲಿ ನಾಡಹಬ್ಬದ ಅಂಗವಾಗಿ ಆಯೋಜಿಸಿದ್ದ ರಂಗೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಾಟಕಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸುವುದರ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಿ, ಚಿಂತನೆಗೆ ಹಚ್ಚುವ ಶಕ್ತಿಯನ್ನು ಹೊಂದಿವೆ. ನಾಟಕಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ರಂಗೋತ್ಸವವನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಶಿವಕೇರಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ವೇದಿಕೆಯಲ್ಲಿದ್ದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಲಬುರಗಿ ಆರ್ಟ್ ಥಿಯೇಟರ್‌ನ ಸುನಿಲ ಮಾನಪಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜುಕುಮಾರ ಕಾಂಬಳೆ, ಸಿದ್ದು ಪಾಳಾ, ಮೈಲಾರಿ ದೊಡ್ಡಮನಿ, ವಿಠ್ಠಲ್ ಚಿಕಣಿ ಮತ್ತಿತರರು ಉಪಸ್ಥಿತರಿದ್ದರು.