Chincholi | ಹವಾಮಾನ ಸ್ನೇಹಿ ಕೃಷಿ ಅಳವಡಿಸಿಕೊಳ್ಳುವಂತೆ ರೈತರಿಗೆ ಸಲಹೆ

Update: 2026-08-04 18:39 IST

ಚಿಂಚೋಳಿ : ಹವಾಮಾನ ವೈಪರೀತ್ಯ, ಮಳೆ ಕೊರತೆ ಹಾಗೂ ಎಲ್ ನಿನೊ ಪರಿಣಾಮದಿಂದ ಕೃಷಿ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ಹವಾಮಾನ ಸ್ನೇಹಿ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ತಜ್ಞರು ಕರೆ ನೀಡಿದರು.

ಭಾರತ ಸರ್ಕಾರದ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಅಡಿಯಲ್ಲಿ ಐಸಿಎಆರ್–ಕೇಂದ್ರ ಶುಷ್ಕಭೂಮಿ ಕೃಷಿ ಸಂಶೋಧನಾ ಸಂಸ್ಥೆ (CRIDA), ಹೈದರಾಬಾದ್ ವತಿಯಿಂದ ತಾಲೂಕಿನ ಕುಸರಂಪಳ್ಳಿ ತಾಂಡದಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ವಿಜ್ಞಾನಿಗಳು ಮಾತನಾಡಿದರು.

ಎಲ್ ನಿನೊ ಪರಿಣಾಮದಿಂದ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಹವಾಮಾನ ಮುನ್ಸೂಚನೆಗಳನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ಮಣ್ಣಿನ ತೇವಾಂಶ ಸಂರಕ್ಷಣೆ, ಮಳೆ ನೀರು ಸಂಗ್ರಹಣೆ, ಬೆಳೆ ವೈವಿಧ್ಯೀಕರಣ, ಬರ ತಾಳುವ ತಳಿಗಳ ಆಯ್ಕೆ ಹಾಗೂ ಜೈವಿಕ ಗೊಬ್ಬರಗಳ ಬಳಕೆಗೆ ಆದ್ಯತೆ ನೀಡಿದರೆ ಪ್ರತಿಕೂಲ ಹವಾಮಾನದಲ್ಲಿಯೂ ಉತ್ತಮ ಇಳುವರಿ ಪಡೆಯಬಹುದು ಎಂದು ವಿವರಿಸಿದರು.

ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣಿನ ಪರೀಕ್ಷೆ ಅತ್ಯಗತ್ಯವಾಗಿದ್ದು, ಸಮತೋಲಿತ ಗೊಬ್ಬರ ಬಳಕೆಯಿಂದ ಉತ್ಪಾದಕತೆ ಹೆಚ್ಚಿಸಬಹುದು ಎಂದು ತಿಳಿಸಿದರು. ರೈತರು ಸಿರಿಧಾನ್ಯಗಳ ಬೆಳೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಮನೆಯ ಆವರಣದಲ್ಲಿ ಪೌಷ್ಟಿಕ ಆಹಾರ ತೋಟ (ನ್ಯೂಟ್ರಿ ಗಾರ್ಡನ್) ಬೆಳೆಸುವಂತೆ ಕರೆ ನೀಡಿದರು.

ಕೃಷಿ ಅರಣ್ಯ (ಅಗ್ರೋ ಫಾರೆಸ್ಟ್ರಿ), ಜೈವಿಕ ಗೊಬ್ಬರಗಳ ಬಳಕೆ ಹಾಗೂ ಮಳೆ ನೀರು ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಲಾಯಿತು.

ಕುಸರಂಪಳ್ಳಿ, ಶಿವರೆಡ್ಡಿಪಳ್ಳಿ, ಚಿಂದನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹವಾಮಾನ ಸ್ನೇಹಿ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದರು.

ಕಾರ್ಯಕ್ರಮದಲ್ಲಿ ಐಸಿಎಆರ್-ಕ್ರಿಡಾದ ಪ್ರಧಾನ ವಿಜ್ಞಾನಿ ಡಾ. ರವಿಕಾಂತ್ ಅಡಕೆ, ಎಸ್‌ಸಿಎಸ್‌ಪಿ ನೋಡಲ್ ಅಧಿಕಾರಿ ಡಾ. ಕೆ.ಬಿ. ಶ್ರೀಧರ್, ಪ್ರಧಾನ ವಿಜ್ಞಾನಿಗಳಾದ ಡಾ. ಕೆ. ರವಿಶಂಕರ್, ಡಾ. ಶ್ರೀದೇವಿ ಶಂಕರ್, ಡಾ. ರೆಜನಿ, ಹಿರಿಯ ವಿಜ್ಞಾನಿಗಳಾದ ಡಾ. ಸವಿತಾ ಸಂತೋಷ್, ಡಾ. ಎ. ಕೀರ್ತಿಕಾ, ಡಾ. ಪ್ರಿಯಾ ಜಿ. ಗುರವ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ್, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಡಾ. ಆರ್.ಎಲ್. ಜಾಧವ್, ಕೃಷಿ ಅಧಿಕಾರಿಗಳಾದ ಇಮ್ರಾನ್ ಅಲಿ, ಅಭಿಲಾಷ್, ಗುರುಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಹಿರಿಯ ವಿಜ್ಞಾನಿ ಡಾ. ಪ್ರಿಯಾ ಜಿ. ಗುರವ್ ವಂದನಾರ್ಪಣೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News