Chincholi | ಪ್ರಾಮಾಣಿಕತೆ, ಸೇವಾ ಮನೋಭಾವವೇ ವ್ಯಕ್ತಿಯನ್ನು ಅಮರಗೊಳಿಸುತ್ತದೆ : ಆರ್.ಗಣಪತರಾವ್
ದಿ. ಶಾಮಣ್ಣ ಪುಣ್ಯಸ್ಮರಣೆ : ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್, ಪೆನ್ ವಿತರಣೆ
ಚಿಂಚೋಳಿ: ಯಾರೇ ವ್ಯಕ್ತಿ ಸಮಾಜದಲ್ಲಿ ಅಮರರಾಗಬೇಕಾದರೆ ಅವರು ಅಳವಡಿಸಿಕೊಂಡ ಆದರ್ಶ ಮೌಲ್ಯಗಳೇ ಕಾರಣ. ಅಂತಹ ಮೌಲ್ಯಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಇತಿಹಾಸದಲ್ಲಿ ಹೆಸರು ಉಳಿಸಿದ ಅಪರೂಪದ ವ್ಯಕ್ತಿ ದಿವಂಗತ ಶಾಮಣ್ಣ ಎಂದು ಸಮಾಜಸೇವಕ ಆರ್. ಗಣಪತರಾವ್ ಹೇಳಿದರು.
ಪಟ್ಟಣದ ಚಂದಾಪುರದಲ್ಲಿರುವ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿವಂಗತ ಶಾಮಣ್ಣ ಅವರ ಪುಣ್ಯಸ್ಮರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಪೆನ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಾನು ಮತ್ತು ದಿ. ಶಾಮಣ್ಣ ಬಾಲ್ಯದ ಸ್ನೇಹಿತರಾಗಿದ್ದು, ಅವರು ಶಾಂತ, ಸರಳ ಹಾಗೂ ಕಾಳಜಿಯುಳ್ಳ ವ್ಯಕ್ತಿತ್ವ ಹೊಂದಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ” ಎಂದು ಸ್ಮರಿಸಿದರು.
ಜಿ.ಬಿ. ಪಾತ್ರೆ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ದಿ. ಶಾಮಣ್ಣ ಅವರು ತಮ್ಮ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಪುತ್ರ ಉಲ್ಲಾಸ ಕುಮಾರ ಕೇರೊಳ್ಳಿ ಕೂಡ ತಂದೆಯ ಆದರ್ಶಗಳನ್ನು ಅನುಸರಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಹೇಳಿದರು.
ಉಲ್ಲಾಸ ಕುಮಾರ ಕೇರೊಳ್ಳಿ ಮಾತನಾಡಿ, “ತಂದೆಯವರು ಸದಾ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದು ಹೇಳುತ್ತಿದ್ದರು. ಅವರ ಆದರ್ಶದಂತೆ ಪ್ರತಿವರ್ಷ ಪುಣ್ಯಸ್ಮರಣೆ ಅಂಗವಾಗಿ ಮಕ್ಕಳಿಗೆ ನೋಟ್‌ಬುಕ್ ಹಾಗೂ ಪೆನ್ ವಿತರಿಸುತ್ತಿದ್ದೇನೆ. ಈ ಸೇವೆಯಿಂದ ಮನಸ್ಸಿಗೆ ಅಪಾರ ತೃಪ್ತಿ ಸಿಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸಂಜೀವ ಕುಮಾರ, ಹನುಮಂತ, ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ ವಿಜಯಕುಮಾರ ಶಾಬಾದಿ, ವೀರ ಕನ್ನಡಿಗ ಸೇನೆಯ ಪ್ರಾಂತೀಯ ಅಧ್ಯಕ್ಷ ವಿಠ್ಠಲ ಕುಸಾಳೆ, ಶಾಲೆಯ ಶಿಕ್ಷಕಿಯರಾದ ಸುಷ್ಮಾ, ಅಪರಂಜಿ, ಸಿದ್ದಿಕಾ, ರೋಹಿಣಿ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.