ಚಿತ್ತಾಪುರ: ಮುಖ್ಯ ರಸ್ತೆಗಳ ಬೀದಿ ದೀಪಗಳ ಸಮಸ್ಯೆಗೆ ಸ್ಪಂದಿಸಿದ ಪುರಸಭೆ
‘ವಾರ್ತಾ ಭಾರತಿ’ ವರದಿ ಫಲಶೃತಿ; ದುರಸ್ತಿ ಹಾಗೂ ನೂತನ ಕಂಬ ಅಳವಡಿಕೆಗೆ ಚಾಲನೆ
ಚಿತ್ತಾಪುರ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಲವು ತಿಂಗಳುಗಳಿಂದ ಬೀದಿ ದೀಪಗಳು ಕಾರ್ಯನಿರ್ವಹಿಸದೇ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಈ ಕುರಿತು ಪ್ರಕಟವಾದ ವಾರ್ತಾ ಭಾರತಿ ಪತ್ರಿಕೆಯ ವಿಶೇಷ ವರದಿಗೆ ಸ್ಪಂದಿಸಿದ ಪುರಸಭೆ ಆಡಳಿತ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ.
ಪಟ್ಟಣದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿನ ಬೀದಿ ದೀಪಗಳು ಬೆಳಗದಿರುವ ಬಗ್ಗೆ ಕಳೆದ ಮಾರ್ಚ್ 19ರಂದು ‘ಚಿತ್ತಾಪುರದ ಮುಖ್ಯ ರಸ್ತೆಯ ಬೀದಿ ದೀಪಗಳ ಕಣ್ಣಾಮುಚ್ಚಾಲೆ; ಕತ್ತಲೆಯಲ್ಲಿ ಹೆದ್ದಾರಿ, ಸಂಚರಿಸಲು ಭಯ’ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯ ನಂತರ ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ. ದಂಡೋತಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ವೃತ್ತ, ಬಸವೇಶ್ವರ ರಸ್ತೆ, ಲಾಡ್ಜಿಂಗ್ ಕ್ರಾಸ್, ಮಳಖೇಡ ರಸ್ತೆ, ಕೋರ್ಟ್ ರಸ್ತೆ, ನಾಗಾವಿ ವೃತ್ತ, ತಹಶೀಲ್ದಾರ್ ರಸ್ತೆ, ಭುವನೇಶ್ವರಿ ವೃತ್ತ, ಜನತಾ ವೃತ್ತ ಹಾಗೂ ಚಿತ್ತಾವಲಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳನ್ನು ಅಳವಡಿಸುವ ಹಾಗೂ ದುರಸ್ತಿ ಕಾರ್ಯ ಆರಂಭಿಸಲಾಗಿದೆ.
ಇದರ ಜೊತೆಗೆ ಲಾಡ್ಜಿಂಗ್ ಕ್ರಾಸ್‌ನಿಂದ ಬಸ್ ಡಿಪೋವರೆಗೆ ನೂತನ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯವೂ ಪ್ರಗತಿಯಲ್ಲಿದ್ದು, ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಎಲ್ಲೆಲ್ಲಿ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದು ತಕ್ಷಣ ದುರಸ್ತಿ ಹಾಗೂ ಬಲ್ಬ್ ಅಳವಡಿಸುವ ಕಾರ್ಯ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ. ದಂಡೋತಿ, “ಪಟ್ಟಣದ ಪ್ರಮುಖ ರಸ್ತೆ ಹಾಗೂ ವಾರ್ಡ್‌ಗಳಲ್ಲಿ ಬೀದಿ ದೀಪಗಳ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಈಗಾಗಲೇ ಬಲ್ಬ್ ಅಳವಡಿಕೆ ಹಾಗೂ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.