×
Ad

ಕಲಬುರಗಿ: ರಸಗೊಬ್ಬರಕ್ಕೆ ಎಫ್‌ಐಡಿ ನಿಯಮ ರದ್ದುಗೊಳಿಸುವಂತೆ ರೈತರ ಪ್ರತಿಭಟನೆ

Update: 2026-06-11 23:41 IST

ಕಲಬುರಗಿ: ರಸಗೊಬ್ಬರ ಖರೀದಿಗೆ ಎಫ್‌ಐಡಿ (FID) ಕಡ್ಡಾಯಗೊಳಿಸಿರುವ ನಿಯಮವನ್ನು ತಕ್ಷಣವೇ ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿದ ರೈತ ಮುಖಂಡರು ತಮಟೆ ಬಾರಿಸುತ್ತ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಎಸ್. ಹೂಗಾರ, “ಜಿಲ್ಲಾಡಳಿತ ರಸಗೊಬ್ಬರ ಕೊರತೆಯಿಲ್ಲ ಎಂದು ಹೇಳುತ್ತಿದೆ. ಕೊರತೆಯೇ ಇಲ್ಲದಿದ್ದರೆ ರೈತರು ಎರಡು-ಮೂರು ದಿನಗಳ ಕಾಲ ಉಪವಾಸದಿಂದ ಸಾಲಿನಲ್ಲಿ ನಿಂತು ರಸಗೊಬ್ಬರ ಪಡೆಯುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ?” ಎಂದು ಪ್ರಶ್ನಿಸಿದ್ದಾರೆ.

“ರಸಗೊಬ್ಬರ ವಿತರಣೆಗೆ ಎಫ್‌ಐಡಿ ಕಡ್ಡಾಯಗೊಳಿಸಿರುವ ಕ್ರಮ ಅವೈಜ್ಞಾನಿಕವಾಗಿದೆ. ಅನೇಕ ರೈತರು ವಯೋವೃದ್ಧರಾಗಿದ್ದು, ಬಯೋಮೆಟ್ರಿಕ್‌ನಲ್ಲಿ ಅವರ ಬೆರಳಚ್ಚು ಸರಿಯಾಗಿ ದಾಖಲಾಗುವುದಿಲ್ಲ. ಪಹಣಿಯಲ್ಲಿ ಹೆಸರಿರುವ ಹಲವರು ಮೃತಪಟ್ಟಿದ್ದು, ಅವರ ಕುಟುಂಬದವರು ರಸಗೊಬ್ಬರ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಎಫ್‌ಐಡಿ ಕಡ್ಡಾಯ ನಿಯಮವನ್ನು ತಕ್ಷಣವೇ ರದ್ದುಪಡಿಸಬೇಕು” ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯ ನಂತರ ರೈತರು ತಮ್ಮ ಏಳು ಬೇಡಿಕೆಗಳನ್ನು ಒಳಗೊಂಡ ಮನವಿಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಜಿಲ್ಲಾಡಳಿತದ ಪರವಾಗಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಶಿಖರ ಮೋಘಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕ ಮುನಾವರ ದೌಲಾ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ ಅಂಕಲಗಾ, ಧರ್ಮರಾಜ ಸಾಹು, ಕರುಬಸಪ್ಪ ಉಜ್ಜು ಹರಸೂರ, ರೇವಣಸಿದ್ದಯ್ಯ ಮಠ, ಶರಣು ಬೈರಪ್ಪ, ಶರಣು ಮಾಗಾ, ನಾಗೇಂದ್ರ ದೇಶಮುಖ, ಬಸವರಾಜ ವಾಳಿ, ಭಾಗಣ್ಣ ಕುಂಬಾರ, ಶಾಂತವೀರಪ್ಪ ಪಾಟೀಲ ದಸ್ತಾಪುರ, ಲಕ್ಷ್ಮೀಪುತ್ರ ಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News