ಕಲಬುರಗಿ | ಜವಳಿ ಪಾರ್ಕ್ ನ ಕಾಮಗಾರಿಗಳ ಶೀಘ್ರ ಆರಂಭ: ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಪಾರ್ಕ್ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧ
ಕಲಬುರಗಿ: ಕಲಬುರಗಿಯಲ್ಲಿ ಸ್ಥಾಪನೆಯಾಗಲಿರುವ ಮಹತ್ವಾಕಾಂಕ್ಷಿ 'ಪಿಎಂ-ಮಿತ್ರ ಜವಳಿ ಪಾರ್ಕ್' ಯೋಜನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ವೇಗವಾಗಿ ಅನುಷ್ಠಾನಗೊಳಿಸಲು ಮೊದಲ ಹಂತದ ಮೂಲಸೌಕರ್ಯ ನೀಲನಕ್ಷೆ ಮತ್ತು ಆಡಳಿತಾತ್ಮಕ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿ ಬಳಿ ಮೊದಲ ಹಂತದಲ್ಲಿ 1,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಜವಳಿ ಪಾರ್ಕ್ ಕಾಮಗಾರಿಗಳ ಕುರಿತು ಚರ್ಚಿಸಲು ಸಚಿವರು ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮೊದಲ ಹಂತದಲ್ಲಿ 1,000 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿದ್ದು, ಹೂಡಿಕೆ ಮಾಡುವ ಉದ್ಯಮಗಳಿಗೆ ತಕ್ಷಣವೇ ಉತ್ಪಾದನೆ ಆರಂಭಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಮೂಲಸೌಕರ್ಯಗಳನ್ನು ಒಳಗೊಂಡ 'ಪ್ಲಗ್ ಅಂಡ್ ಪ್ಲೇ' ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮೊದಲ ಹಂತದಲ್ಲಿ ಕೋರ್ ಮೂಲಸೌಕರ್ಯಗಳ ಕಾಮಗಾರಿಗಳು ಆರಂಭವಾಗಲಿದ್ದು, ಸಿವಿಲ್ ಮತ್ತು ಭೂ ಅಭಿವೃದ್ಧಿ, ಆಂತರಿಕ ರಸ್ತೆಗಳ ನಿರ್ಮಾಣ ಮತ್ತು ಮಳೆನೀರನ್ನು ಸುಲಭವಾಗಿ ಹೊರಹಾಕಲು ಸುಸಜ್ಜಿತ ಆರ್‌ಸಿಸಿ (RCC) ಡ್ರೈನೇಜ್ ವ್ಯವಸ್ಥೆ ಕಲ್ಪಿಸಲಾಗುವುದು. ಇಡೀ ಪಾರ್ಕ್‌ನಲ್ಲಿ ಭೂಗತ (UG) ಹೈ-ಟೆನ್ಷನ್/ಲೋ-ಟೆನ್ಷನ್ (HT/LT) ವಿದ್ಯುತ್ ವಿತರಣಾ ಮಾರ್ಗಗಳು ಮತ್ತು ಪರಿಸರ ಸ್ನೇಹಿ ಸೋಲಾರ್ ಬೀದಿ ದೀಪಗಳ ಅಳವಡಿಸುವ ಪ್ರಕ್ರಿಯೆಯೂ ನಡೆಯಲಿದೆ ಎಂದು ಸಚಿವರು ವಿವರಿಸಿದರು.
5 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಾಗಾರ (GLSR) ಮೂಲಕ ಶುದ್ಧ ನೀರು ಸರಬರಾಜು ಜಾಲ ಮತ್ತು ಸಂಸ್ಕರಿಸಿದ ನೀರಿಗಾಗಿ 10 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ (ELSR) ನಿರ್ಮಾಣ. ಪರಿಸರ ಸಂರಕ್ಷಣೆಗಾಗಿ ಶೂನ್ಯ ದ್ರವ ವಿಸರ್ಜನೆ (ZLD) ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ 2.5 MLD ಸಾಮರ್ಥ್ಯದ ಸಾಮಾನ್ಯ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕ (CETP) ಮತ್ತು ಅದಕ್ಕೆ ಪೂರಕವಾದ ಪೈಪ್‌ಲೈನ್ ಜಾಲದ ಸ್ಥಾಪನೆ ಕಾರ್ಯ ಆರಂಭಗೊಳ್ಳಲಿದೆ ಎಂದ ಸಚಿವ ಖರ್ಗೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ವಾಣಿಜ್ಯ ಹಾಗೂ ಕೈಗಾರಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್ ಎಸ್, ಜವಳಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಹಾಗೂ ವಿಸಿ ಮೂಲಕ ಕಲಬುರಗಿ ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮ್ ಶರೀಫ್ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.