ಕಲಬುರಗಿ : ಕೇಂದ್ರ ಸರ್ಕಾರ ಮಂಡಿಸಲು ಸಿದ್ಧವಾಗಿರುವ ಸಂವಿಧಾನದ 132ನೇ ತಿದ್ದುಪಡಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯು ರಾಜಕೀಯ ಹಿತಾಸಕ್ತಿಯಿಂದ ಕೂಡಿದ್ದು, ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿರುವ ಈ ಮಸೂದೆಯಿಂದ ಸಂಸತ್ತಿನಲ್ಲಿ ಕನ್ನಡಿಗರ ಧ್ವನಿ ಕುಂದುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಸ್ತಾವಿತ ಮಸೂದೆಯ ಪ್ರಕಾರ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾಪವಿದೆ. ಇದರಿಂದ ಕರ್ನಾಟಕದ ಸಂಸತ್ ಸ್ಥಾನಗಳು 28ರಿಂದ 42ಕ್ಕೆ ಏರಿಕೆಯಾದರೆ, ಉತ್ತರ ಪ್ರದೇಶದ ಸ್ಥಾನಗಳು 80ರಿಂದ 120ಕ್ಕೆ ಹೆಚ್ಚಾಗಲಿವೆ. ಹೀಗಾಗಿ ಸಂಸತ್ತಿನಲ್ಲಿ ಉತ್ತರ ಭಾರತದ ಸಂಸದರ ಸಂಖ್ಯೆಯನ್ನು ಮೀರಿಸಲು ಸಾಧ್ಯವಾಗುವುದಿಲ್ಲ. ಇದು ಕನ್ನಡದ ಅಸ್ಮಿತೆಗೆ ಧಕ್ಕೆ ತರಲಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮತ್ತು ಆರೆಸ್ಸೆಸ್‌ ತಮ್ಮ ರಾಜಕೀಯ ಗೆಲುವಿಗೆ ಅನುಕೂಲವಾಗುವಂತೆ ಚುನಾವಣಾ ನಕ್ಷೆಯನ್ನು ಬದಲಾಯಿಸಲು ಹಾಗೂ ಅಧಿಕಾರವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಈ ತಂತ್ರ ರೂಪಿಸಿವೆ ಎಂದು ಅವರು ಟೀಕಿಸಿದ್ದಾರೆ.

ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲವಿದೆ. ಆದರೆ, ಅದನ್ನು ಕ್ಷೇತ್ರ ಪುನರ್‌ವಿಂಗಡಣೆಗೆ ತಳುಕು ಹಾಕದೆ, ಈಗಿರುವ 543 ಲೋಕಸಭಾ ಸ್ಥಾನಗಳಲ್ಲಿಯೇ ತಕ್ಷಣ ಜಾರಿಗೆ ತರಬೇಕು ಎಂದು ಡಾ.ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

2008ರಲ್ಲಿ ಯುಪಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ, 2010ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲಾಗಿತ್ತು. ಆದರೆ, 2023ರಲ್ಲಿ ಬಿಜೆಪಿ ಸರ್ಕಾರ ಇದನ್ನು ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಗೆ ಜೋಡಿಸಿ ಗೊಂದಲ ಸೃಷ್ಟಿಸಿದೆ. ಮಹಿಳಾ ಸಬಲೀಕರಣವನ್ನು ಚುನಾವಣಾ ಸರಕನ್ನಾಗಿ ಮಾಡದೆ, ಅಗತ್ಯ ಸಾಂವಿಧಾನಿಕ ತಿದ್ದುಪಡಿ ಮೂಲಕ 2029ರ ಚುನಾವಣೆಯಿಂದಲೇ ಶೇ. 33ರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಸ್‌ಸಿ/ಎಸ್‌ಟಿ ಸಮುದಾಯ ಹಾಗೂ ದಕ್ಷಿಣ ಭಾರತಕ್ಕೆ ಅನ್ಯಾಯ :

ಜನಗಣತಿ ಪ್ರಕ್ರಿಯೆ ನಡೆಯುತ್ತಿರುವಾಗಲೇ ತರಾತುರಿಯಲ್ಲಿ ಈ ಮಸೂದೆ ತರುವುದರ ಉದ್ದೇಶವನ್ನು ಪ್ರಶ್ನಿಸಿರುವ ಸಚಿವರು, ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಮಾಡಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿನ ಸ್ಥಾನಗಳು ದೊರೆಯುತ್ತವೆ. ಆದರೆ, ಸರ್ಕಾರಕ್ಕೆ ಅದು ಬೇಕಿಲ್ಲದ ಕಾರಣ 1971ರ ಜನಗಣತಿಯ ಅನುಪಾತವನ್ನೇ ಮುಂದುವರಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ಎಲ್ಲ ರಾಜ್ಯಗಳಿಗೂ ಶೇ. 50ರಷ್ಟು ಸ್ಥಾನಗಳನ್ನು ಏಕರೂಪವಾಗಿ ಹೆಚ್ಚಿಸಿ, 2051ರವರೆಗೆ ಈಗಿನ ಅನುಪಾತವನ್ನೇ ಉಳಿಸಿಕೊಳ್ಳುವ ಕೇಂದ್ರ ಸಚಿವ ಸಂಪುಟದ ಪ್ರಸ್ತಾವನೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಸಮಾನ ರಾಜಕೀಯ ಪ್ರಾತಿನಿಧ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಆದ್ದರಿಂದ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್‌ವಿಂಗಡಣೆಗೆ ಸಂಬಂಧಿಸಿದ ವೈಜ್ಞಾನಿಕ ಆಧಾರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಅಲ್ಲದೆ, ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ನ್ಯಾಯಸಮ್ಮತ ಚೌಕಟ್ಟನ್ನು ರೂಪಿಸಬೇಕು ಎಂದು ಡಾ.ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ