ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ : ಮೆರವಣಿಗೆಯೊಂದಿಗೆ ವಿಚಾರಣೆಗೆ ಬಂದ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್
ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಎನ್.ರವಿಕುಮಾರ್ ಅವರು ಸೋಮವಾರ ಬಿಜೆಪಿ ಮುಖಂಡರೊಂದಿಗೆ ಮೆರವಣಿಗೆ ಮೂಲಕ ಇಲ್ಲಿನ ದಕ್ಷಿಣ ಎಸಿಪಿ ಕಚೇರಿಗೆ ಹಾಜರಾದರು.
"ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿರಬಹುದು' ಎಂದು ಹೇಳಿಕೆ ನೀಡಿದ್ದ ಎನ್.ರವಿಕುಮಾರ್, ಪೊಲೀಸ್ ಅಧಿಕಾರಿಗಳ ವಿರುದ್ಧ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೂಡ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅಲ್ಲದೆ ಜಾತಿ ನಿಂದನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಅವರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿತ್ತು.
ಹೈಕೋರ್ಟ್ ಸೂಚನೆ ಮೇರೆಗೆ ಎನ್.ರವಿಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ದಕ್ಷಿಣ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಎಂಎಲ್ಸಿ ಶಶೀಲ್ ನಮೋಶಿ, ಅಮರನಾಥ್ ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಅವ್ವಣ್ಣಾ ಮ್ಯಕೆರಿ, ಬಾಬುರಾವ್ ಚವ್ಹಾಣ್, ರಾಜು ವಾಡೇಕರ್, ಗಣೇಶ್ ತಳಕೇರಿ, ವಿದ್ಯಾಸಾಗರ್ ಕುಲಕರ್ಣಿ, ಶರಣಪ್ಪ ತಳವಾರ ಸೇರಿದಂತೆ ಹಲವರು ಭಾಗಿಯಾಗಿದ್ದರು.