×
Ad

MRPಗಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದರೆ ಲೈಸೆನ್ಸ್ ರದ್ದು: ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಎಚ್ಚರಿಕೆ

Update: 2026-06-08 22:43 IST

ಕಲಬುರಗಿ: ನಿಗದಿಪಡಿಸಿದ ಎಂ.ಆರ್.ಪಿ. ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದಲ್ಲಿ ಅಂತಹ ರಸಗೊಬ್ಬರ ಅಂಗಡಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಲ್ಲದೆ ಅಂತಹ ಕೃಷಿ ಪರಿಕರ ಮಾರಾಟ ಅಂಗಡಿಗಳ ಪರವಾನಿಗೆ ಸಹ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಸಗೊಬ್ಬರ ಅಂಗಡಿಗಳ ಡೀಲರ್-ರಿಟೇಲರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತುರ್ತು ಸಭೆ ಕರೆದ ಅವರು, ಅಲ್ಲಲ್ಲಿ ರಸಗೊಬ್ಬರ ಹೆಚ್ಚಿನ ಮಾರಾಟಕ್ಕೆ ಮಾಡಲಾಗುತ್ತಿದೆ ಎಂದು ರೈತರಿಂದ ದೂರು ಬರುತ್ತಿವೆ, ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಡಿಎಪಿ 50 ಕೆ.ಜಿ. ಬ್ಯಾಗಿಗೆ 1,350 ರೂ., ಯೂರಿಯಾ 45 ಕೆ.ಜಿ. ಬ್ಯಾಗಿಗೆ 266 ರೂ. ಎಂ.ಆರ್.ಪಿ. ದರವಿದ್ದು, ಇದಕ್ಕಿಂತ ಹೆಚ್ಚಿನ ದರ ಪಡೆದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.  

ರಸಗೊಬ್ಬರ ಸಮಸ್ಯೆ ಕುರಿತು ರೈತರ ಅಹವಾಲು ಆಲಿಸಲು ಕೂಡಲೆ ಸಹಾಯವಾಣಿ ಸ್ಥಾಪಿಸಬೇಕು. ಪ್ರಸ್ತುತ ಬೇಡಿಕೆ ಅನುಗುಣವಾಗಿ ಡಿ.ಎ.ಪಿ. ಸೇರಿ ಇತರೆ ರಸಗೊಬ್ಬರಗಳನ್ನು ತಾಲೂಕಿಗೆ ಮರು ಹಂಚಿಕೆ ಮಾಡಬೇಕು. ಪ್ರತಿನಿತ್ಯ ಪಿ.ಓ.ಎಸ್., ಸ್ಟಾಕ್ ಅಪಡೇಟ್ ಮಾಡುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮತ್ತು ಪ್ರತಿ ದಿನದ ವರದಿ ತಮಗೆ ಸಲ್ಲಿಸುವಂತೆ ಜಂಟಿ ಕೃಷಿ ನಿದೇಶಕರಿಗೆ ಡಿಸಿ ಸೂಚಿಸಿದರು.

ಚಿತ್ತಾಪುರ ಪಟ್ಟಣದಲ್ಲಿ ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಪತ್ರಿಕೆಯಲ್ಲಿ ಸುದ್ದಿ ಬಂದಿದೆ. ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಿ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಹಾಯಕ ಕೃಷಿ ನಿರ್ದೇಶಕ ಸಂಜೀವ ಕುಮಾರ್‌ ಅವರಿಗೆ ಸೂಚಿಸಿದರು. 

ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶಿಖರ್ ಮೋಘಾ, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ಸೇರಿದಂತೆ ತಾಲೂಕಿನ ಸಹಾಯಕ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ರಸಗೊಬ್ಬರ ವಿತರಕರಾದ ಡೀಲರ್, ರಿಟೇಲರ್, ರಸಗೊಬ್ಬರ ಕಂಪನಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News