×
Ad

ಕಲಬುರಗಿ | ಇಂಗಳಗಿ ರಸ್ತೆ ದುರಸ್ತಿಗೆ ಆಗ್ರಹಿಸಿ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

Update: 2026-06-08 22:52 IST

ಅಫಜಲಪುರ: ತಾಲೂಕಿನ ಮದರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಗಳಗಿ (ಬಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಸೋಮವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನಬಂಡಿಗಳ ಮೂಲಕ ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಇಂಗಳಗಿ ಕ್ರಾಸ್‌ನಲ್ಲಿರುವ ಕಲಬುರಗಿ–ಸೋಲಾಪುರ 150(ಇ) ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಪ್ರತಿಭಟನೆಯಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.

ಪ್ರತಿಭಟನೆಯಲ್ಲಿ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ “ಇಂಗಳಗಿ (ಬಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗ್ರಾಮಸ್ಥರ ಜೀವನಾಡಿಯಾಗಿದೆ. ಪ್ರತಿದಿನ ನೂರಾರು ಜನರು ಇದೇ ರಸ್ತೆಯ ಮೂಲಕ ಸಂಚರಿಸುತ್ತಾರೆ. ಆದರೆ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಮೇಲ್ಮೈ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದ ರೈತರು, ವಿದ್ಯಾರ್ಥಿಗಳು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ರೈತರ ಜಮೀನುಗಳಲ್ಲಿ ವಿದ್ಯುತ್ ಪರಿವರ್ತಕಗಳು (ಟಿಸಿ) ಸುಟ್ಟ ಸಂದರ್ಭದಲ್ಲಿ ತಕ್ಷಣ ದುರಸ್ತಿ ಅಥವಾ ಬದಲಿ ವ್ಯವಸ್ಥೆ ಕಲ್ಪಿಸಬೇಕು. ಟಿಸಿ ದುರಸ್ತಿಗೆ ಜೆಸ್ಕಾಂ ಸಿಬ್ಬಂದಿ ಹಣ ಕೇಳುತ್ತಿರುವ ಕುರಿತು ದೂರುಗಳು ಕೇಳಿಬರುತ್ತಿದ್ದು, ಜೆಸ್ಕಾಂನ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಸವರಾಜ ಚಾಂದಕವಟೆ, ಶರಣಬಸಪ್ಪ ಮಮಶೆಟ್ಟಿ, ಸಂತೋಷ ಮಲಗೊಂಡ, ಅಶೋಕ ಹೂಗಾರ, ಸಿದ್ದು ದಣ್ಣೂರ, ಹಣಮಂತ ಗೌರ, ಭಾಗಣ್ಣ ಘತ್ತರಗಿ, ಅಣ್ಣಾರಾವ ಪಾಟೀಲ, ಸಚಿನ್ ನಡಗೇರಿ, ಬೀರಪ್ಪ ಮೊನಟಗಿ ಹಾಗೂ ಭೀಮಶ್ಯಾ ಬಡದಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News