×
Ad

Kalaburagi | ಕೆಬಿಎನ್ ದರ್ಗಾದ ಆಸ್ತಿ ಅಕ್ರಮ ಮಾರಾಟ: ಆರೋಪ

ಮಾರಾಟ ಪತ್ರ ರದ್ದುಪಡಿಸಿ ಆಸ್ತಿ ವಶಕ್ಕೆ ಪಡೆಯಲು ವಕ್ಫ್ ಮಂಡಳಿಗೆ ದೂರು

Update: 2026-06-08 12:31 IST

ಬೆಂಗಳೂರು, ಜೂ.7: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಅತಿಕ್ರಮಣ ಮತ್ತು ಅಕ್ರಮ ಮಾರಾಟದ ಕುರಿತು ಪದೇದೇ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ಕಲಬುರಗಿಯಲ್ಲಿ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

ಐವತ್ತು ವರ್ಷಗಳ ಹಿಂದೆಯೇ ಗಜೆಟ್‌ನಲ್ಲಿರುವ ವಕ್ಫ್ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಹಾಗೂ ಹೆಸರಿಗೆ ವರ್ಗಾವಣೆ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ವಕ್ಫ್ ಆಸ್ತಿಯನ್ನು ಮರಳಿ ಪಡೆಯುವಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸಿಇಒಗೆ ದೂರು ನೀಡಲಾಗಿದೆ.

1974ರ ಸರಕಾರಿ ಗಜೆಟ್ ಅಧಿಸೂಚನೆಯಲ್ಲಿ ಅಧಿಕೃತವಾಗಿ ದಾಖಲಾಗಿರುವ ಬಡೇಪುರ ಗ್ರಾಮದ ಸರ್ವೆ ನಂ. 40/1ರ ದರ್ಗಾ ಶರೀಫ್ ಹಝರತ್ ಖ್ವಾಜಾ ಬಂದೇನವಾಜ್(ಸುನ್ನಿ) ಸಂಸ್ಥೆಗೆ ಸೇರಿದ 29.36 ಗುಂಟೆ ಜಮೀನಿನಲ್ಲಿ 20 ಗುಂಟೆಯಲ್ಲಿ ಎ.ಎನ್ ಬ್ಯಾಂಕ್ವೆಟ್ ಹಾಲ್ ನಿರ್ಮಾಣ, ಅಕ್ರಮ ಮಾರಾಟ, ಅಕ್ರಮ ಸ್ವಾಧೀನ ಹಾಗೂ ವಾಣಿಜ್ಯ ಬಳಕೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರುದಾರ ಸೈಯದ್ ಖಾಜಾ ಸದರ್ ಉಲ್ ಹಸನ್ ಆಗ್ರಹಿಸಿದ್ದಾರೆ.

ದಾಖಲೆಗಳೇನು ಹೇಳುತ್ತವೆ? :

ಬಡೇಪುರ ಗ್ರಾಮದ ಸರ್ವೆ ನಂ.40 ದರ್ಗಾ ಶರೀಫ್ ಹಜರತ್ ಖ್ವಾಜಾ ಬಂದೇನವಾಜ್ (ಸುನ್ನಿ) ಸಂಸ್ಥೆಗೆ ಸೇರಿದ 29 ಎಕರ 28 ಗುಂಟೆ ಜಮೀನು 1974ರ ವಕ್ಫ್ ಗಜೆಟ್‌ನಲ್ಲಿ ಇದೆ. ಇದರಲ್ಲಿ ಒಂದು ಎಕರೆ 28 ಗುಂಟೆ ವಕ್ಫ್ ಜಮೀನು, ಆದಿಲ್ ಅನ್ಸಾರಿ ತಂದೆ ಅಜೀಜ್ ಅಹ್ಮದ್ ಅನ್ಸಾರಿ ಅವರು ಫತೇ ಖಾನ್ ಅಬ್ದುಲ್ ನಯಿಮ್ ಅಬ್ದುಲ್ ರಹೀಮ್ ಅವರಿಗೆ 2009ರಲ್ಲಿ ನೋಂದಾಯಿಸಿ (ಸೇಲ್ ಡೀಡ್) ಮೂಲಕ ಮಾರಾಟ ಮಾಡಲಾಗಿದೆ. ಕಾನೂನು ಪ್ರಕಾರ ವಕ್ಫ್ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಅವಕಾಶ ಇಲ್ಲ. ಮಂಡಳಿಯ ಪೂರ್ವಾನುಮತಿ ಇಲ್ಲದೆ ಜಮೀನಿನ ಮೇಲೆ ಅಭಿವೃದ್ಧಿಗೂ ಅನುಮತಿ ಕಡ್ಡಾಯ. ಆದರೆ ಇಲ್ಲಿ ಅವ್ಯವಹಾರ ನಡೆಸಿ ಕಾನೂನುಬಾಹಿರವಾಗಿ ಮಾರಾಟ ಮಾಡಲಾಗಿದೆ ಎಂದು ನ್ಯಾಷನಲ್ ವಕ್ಫ್ ಆಸ್ಸೆಟ್ ಪ್ರೊಟೆಕ್ಷನ್ ಫೋರಮ್ ಆರೋಪಿಸಿದೆ.

ವಕ್ಫ್ ಗಜೆಟ್‌ನಲ್ಲಿ ದಾಖಲಾಗಿದ್ದ ಜಮೀನು ಖಾಸಗಿ ಹೆಸರಿಗೆ ಹೇಗೆ ವರ್ಗಾವಣೆಯಾಯಿತು, ಮಾರಾಟದ ಸಂದರ್ಭದಲ್ಲಿ ಸಂಬಂಧಿತ ಇಲಾಖೆ ಏಕೆ ಕ್ರಮ ಕೈಗೊಂಡಿಲ್ಲ, ವಕ್ಫ್ ಮಂಡಳಿಯ ಅನುಮತಿ ಪಡೆಯಲಾಗಿತ್ತೇ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದವರು ಯಾರು, ವಕ್ಫ್ ಆಸ್ತಿಯ ಆದಾಯ ಯಾರ ಪಾಲಾಗುತ್ತಿದೆ ಎಂಬ ಪ್ರಶ್ನೆ ಮತ್ತು ಚರ್ಚೆ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿವೆ.

2009ರ ಮಾರಾಟ ಪತ್ರವನ್ನು ಅಮಾನ್ಯ ಎಂದು ಘೋಷಿಸಿ, ಆಸ್ತಿಯ ಕುರಿತು ವಿಶೇಷ ತನಿಖೆ ನಡೆಸಬೇಕು. ವಕ್ಫ್ ಆಸ್ತಿಯ ಮೇಲಿನ ಅಕ್ರಮ ಕಟ್ಟಡ ನಿರ್ಮಾಣ ತೆರವುಗೊಳಿಸಬೇಕು. ಜಮೀನನ್ನು ವಕ್ಫ್ ಸಂಸ್ಥೆಯ ವಶಕ್ಕೆ ಮರಳಿಪಡೆಯಬೇಕು. ಸಂಬಂಧಪಟ್ಟ ಆರೋಪಿಗಳ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.

ದರ್ಗಾದ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ದೂರು ಬಂದಿದೆ. ಇದರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ದೂರನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

-ಇಕ್ರಮ್ ಶರೀಫ್, ಜಿಲ್ಲಾಧಿಕಾರಿ ಕಲಬುರಗಿ

ಎ.ಎನ್.ಬ್ಯಾಂಕ್ವೆಟ್ ಫಂಕ್ಷನ್ ಹಾಲ್ ನಿರ್ಮಿಸಲಾದ ಜಮೀನು ಕೆಬಿಎನ್ ದರ್ಗಾದ ವಕ್ಫ್ ಆಸ್ತಿ. ಈ ಆಸ್ತಿಯು ಖಾಸಗಿಯಾಗಿ ನೋಂದಣಿಯಾಗಿ ಮಾರಾಟವಾಗಿರುವ ಹಿನ್ನೆಲೆಯ ದಾಖಲೆಗಳನ್ನು ನಾವು ಕಲೆಹಾಕುತ್ತಿದ್ದೇವೆ. ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.

-ಅಬ್ದುಲ್ ಮನ್ನಾನ, ಜಿಲ್ಲಾ ವಕ್ಫ್ ಅಧಿಕಾರಿ, ಕಲಬುರಗಿ

×
Ad

ವಕ್ಫ್ ಆಸ್ತಿ ಸಮುದಾಯಕ್ಕೆ ಸೇರಿರುವ ಸಂಪತ್ತು. ಇದರ ರಕ್ಷಣೆ ಪ್ರತಿಯೊಬ್ಬರದ್ದಾಗಿದೆ. ಬಡವರ ಅನುಕೂಲಕ್ಕಾಗಿ ಇರುವ ವಕ್ಫ್ ಜಮೀನುಗಳನ್ನು ಅಕ್ರಮ ಮಾರಾಟ ಮತ್ತು ಖಾಸಗಿ ಬಳಕೆ ತಡೆಯುವುದು ಕಾನೂನಿನ ಜವಾಬ್ದಾರಿ. ದರ್ಗಾದ ಹೆಸರಿನ ಆಸ್ತಿ ದುರ್ಬಳಕೆ ಮತ್ತು ಅತಿಕ್ರಮಣಗಳ ಬಗ್ಗೆ ತನಿಖೆ ನಡೆಸಿ ಸತ್ಯ ಹೊರತರಬೇಕು.

-ಸೈಯದ್ ಖಾಜಾ ಸದರ್ ಉಲ್‌ಹಸನ್, ಅಧ್ಯಕ್ಷರು, ನ್ಯಾಷನಲ್ ವಕ್ಫ್ ಆಸ್ಸೆಟ್ ಪ್ರೊಟೆಕ್ಷನ್ ಫೋರಮ್ ಕಲಬುರಗಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News