ಬೆಳೆ ವಿಮೆ ಅನ್ಯಾಯ ಸರಿಪಡಿಸಿ ರೈತರಿಗೆ ನ್ಯಾಯ ಕೊಡಿ: ಸುಭಾಷ್ ಆರ್ ಗುತ್ತೇದಾರ

Update: 2026-08-10 20:09 IST

ಆಳಂದ: 2025-26ನೇ ಸಾಲಿನ ಆಳಂದ ತಾಲೂಕಿನ ಹಲವು ಗ್ರಾಮಗಳ ರೈತರಿಗೆ ಬೆಳೆ ವಿಮೆ ಜಮೆಯಾಗದಿರುವ ಕುರಿತು ಸಮಗ್ರ ತನಿಖೆ ನಡೆಸಿ, ಅರ್ಹ ರೈತರಿಗೆ ತಕ್ಷಣ ವಿಮೆ ಮೊತ್ತ ಜಮೆ ಮಾಡುವಂತೆ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಆಗ್ರಹಿಸಿದರು.

ಸೋಮವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಆಳಂಡ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಆಳಂದ ತಾಲೂಕಿನ ಸಾವಿರಾರು ರೈತರು ಬೆಳೆ ನಷ್ಟ ಅನುಭವಿಸಿದ್ದರೂ, ಹಲವು ಗ್ರಾಮಗಳ ರೈತರಿಗೆ ಇನ್ನೂ ಬೆಳೆ ವಿಮೆ ಪರಿಹಾರ ಜಮೆಯಾಗಿಲ್ಲ. ಕೆಲವು ಗ್ರಾಮಗಳನ್ನು ಸಂಪೂರ್ಣವಾಗಿ "ಶೂನ್ಯ" ಎಂದು ಪರಿಗಣಿಸಿರುವುದು ರೈತರಲ್ಲಿ ತೀವ್ರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದೂರಿದರು.

ವಾಸ್ತವದಲ್ಲಿ ಆ ಗ್ರಾಮಗಳಲ್ಲಿ ಬೆಳೆ ಹಾನಿ ಸಂಭವಿಸಿದ್ದರೂ, ಅವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ನಡೆಸಿರುವುದು, ಬೆಳೆ ಕಟಾವು ಪ್ರಯೋಗ ನಡೆಸುವ ವೇಳೆ ಲೋಪದೋಷಗಳು ನಡೆದಿರುವುದು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ನ್ಯಾಯಯುತ ಪರಿಹಾರ ದೊರೆಯದೆ ಅನ್ಯಾಯವಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ ಎಂದು ಆರೋಪಿಸಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್ ಗುತ್ತೇದಾರ ಮಾತನಾಡಿ, ವಿಮೆ ಕಂಪನಿಯ ಅಧಿಕಾರಿಗಳು ಮತ್ತು ಸಂಬoಧಿಸಿದ ಇಲಾಖೆಯ ಕೆಲವು ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ, ಗೋಲಮಾಲ್ ಹಾಗೂ ಪಾರದರ್ಶಕತೆಯ ಅಭಾವದಿಂದ ಅರ್ಹ ರೈತರು ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹಲವಾರು ಗ್ರಾಮಗಳಲ್ಲಿ ಸಿಸಿ ಕಟಿಂಗ್ ನಡೆಸುವ ಸಂದರ್ಭದಲ್ಲಿ ನೈಜ ಬೆಳೆ ಪರಿಸ್ಥಿತಿಯನ್ನು ಪರಿಗಣಿಸದೆ ಅವೈಜ್ಞಾನಿಕ ಅಂಕಿ-ಅoಶಗಳನ್ನು ದಾಖಲಿಸಲಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ ಎಂದು ಹೇಳಿದರು.

ಆಳಂದ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಾದ ಖಜೂರಿ, ಹಾಳ ತಡಕಲ, ಹಡಲಗಿ, ಧುತ್ತರಗಾಂವ, ಆಳಂಗಾ, ಹೆಬಳಿ, ಕೋರಹಳ್ಳಿ, ಹಳ್ಳಿ ಸಲಗರ, ಮುನ್ನಹಳ್ಳಿ, ಧಂಗಾಪೂರ, ನಿಂಬರ್ಗಾ ಸೇರಿದಂತೆ ಅನೇಕ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಬೆಳೆ ವಿಮೆ ಬಂದಿರುವುದಿಲ್ಲ ಎಂದು ಆಪಾದಿಸಿದರು.

ಬಿಜೆಪಿ ಹಿರಿಯ ಮುಖಂಡರಾದ ವೀರಣ್ಣಾ ಮಂಗಾಣೆ, ಚಂದ್ರಶೇಖರ ಹಿರೇಮಠ, ಅಣ್ಣಾರಾವ ಪಾಟೀಲ ಕವಲಗಾ, ಬಸವರಾಜ ಬಿರಾದಾರ, ಹಣಮಂತ ಕಾಬಡೆ, ಶರಣಗೌಡ ದೇವಂತಗಿ, ಶಿವಪುತ್ರ ನಡಗೇರಿ, ಕಲ್ಯಾಣರಾವ ಪಾಟೀಲ ಮಾತನಾಡಿ, ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸುಭಾಷ ಪಾಟೀಲ, ಆನಂದರಾವ ಪಾಟೀಲ, ಕಲ್ಯಾಣಿ ದಾನಾಗೋಳ, ಶಿವಪ್ಪ ವಾರಿಕ, ಮಹಾದೇವಪ್ಪ ವಾಡೆ, ಆದಿನಾಥ ಹೀರಾ, ಕುಮಾರ ಬಂಡೆ, ಸಂತೋಷ ಹಾದಿಮನಿ, ಶಂಕರಗೌಡ ಪಾಟೀಲ, ರುದ್ರಯ್ಯ ಹಿರೇಮಠ, ಅಮೃತ ಬಿಬ್ರಾಣಿ, ನಾಗರಾಜ ಶೇಗಜಿ, ನಾಗರಾಜ ದೇನಕ, ಬಸವರಾಜ ಹತ್ತರಕಿ, ವೈಜನಾಥ ಪಾಟೀಲ, ಸುವರ್ಣಾ ಪಾಟೀಲ, ಶಿವಪ್ಪ ಘಂಟೆ, ಚಂದ್ರಕಾಮಥ ಭೂಸನೂರ, ಧರೇಪ್ಪ ಜಕಾಪೂರೆ, ಫಯ್ಯಾಜ ಪಟೇಲ, ಸಿದ್ದು ಪಾಟೀಲ, ಮಲ್ಲಿಕಾರ್ಜುನ ಸಾವಳಗಿ, ಶಿವಲಿಂಗಪ್ಪ ದರ್ಗಾಶಿರೂರ, ಅಶೋಕ ಘಾಣೂರೆ, ಪ್ರಕಾಶ ಸಣಮನಿ, ಸಂಜಯ ಚಂಗಳೆ, ಶಿವರಾಜ ಅವರಳ್ಳಿ, ಸೀತಾರಾಮ ಜಮಾದಾರ ಸೇರಿದಂತೆ ಬಿಜೆಪಿಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ರೈತರು ಭಾಗವಹಿಸಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News