Kalaburagi | ಹಳದಿ ನಂಜುರೋಗ ಕೀಟ ನಿರ್ವಹಣೆ: ರೈತರಿಗೆ ಸಲಹೆ
ಹೆಸರು, ಉದ್ದು, ಸೋಯಾಬೀನ್ ಬೆಳೆಗಳಲ್ಲಿ ರೋಗಬಾಧೆ; ಮುನ್ನೆಚ್ಚರಿಕೆ ವಹಿಸಲು ಸೂಚನೆ
ಕಲಬುರಗಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳು 35ರಿಂದ 55 ದಿನಗಳ ಬೆಳವಣಿಗೆ ಹಾಗೂ ಹೂ ಬಿಡುವ ಹಂತ ತಲುಪಿವೆ. ಇತ್ತೀಚಿನ ಹವಾಮಾನ ವೈಪರೀತ್ಯ ಹಾಗೂ ಅಲ್ಪ ಪ್ರಮಾಣದ ಮಳೆಯ ಹಿನ್ನೆಲೆಯಲ್ಲಿ ರಸಹೀರುವ ಕೀಟಗಳು, ಎಲೆ ಮತ್ತು ಕಾಂಡ ತಿನ್ನುವ ಹುಳುಗಳ ಬಾಧೆಯೊಂದಿಗೆ ಹಳದಿ ನಂಜುರೋಗದ ಲಕ್ಷಣಗಳು ಕಂಡುಬರುತ್ತಿದ್ದು, ರೈತರು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ವಿಜ್ಞಾನಿಗಳು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳಲ್ಲಿ ಹಳದಿ ನಂಜುರೋಗದ ಬಾಧೆ ಕಂಡುಬಂದಿದೆ.
ಹಳದಿ ನಂಜುರೋಗದ ಲಕ್ಷಣಗಳು:
ಮೊದಲಿಗೆ ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು, ನಂತರ ಅವು ಹೆಚ್ಚಾಗಿ ಎಲೆಗಳು ಹಳದಿ-ಹಸಿರು ಬಣ್ಣಕ್ಕೆ ತಿರುಗುತ್ತವೆ. ರೋಗಬಾಧೆ ತೀವ್ರವಾದಾಗ ಗಿಡದ ಎಲೆಗಳು ಹಾಗೂ ಕಾಯಿಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗುತ್ತವೆ. ಹೂವು ಬಿಡುವಿಕೆ ಕಡಿಮೆಯಾಗುವುದರ ಜೊತೆಗೆ ಕಾಯಿಗಳಲ್ಲಿ ಕಾಳು ಕಟ್ಟದೆ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ. ತೀವ್ರ ಬಾಧೆಯ ಸಂದರ್ಭದಲ್ಲಿ ಇಡೀ ಹೊಲವೇ ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆಯಿದೆ.
ಹಳದಿ ಮೊಸಾಯಿಕ್ ವೈರಸ್ ಸೋಯಾಬೀನ್, ಉದ್ದು ಹಾಗೂ ಹೆಸರು ಬೆಳೆಗಳಿಗೆ ಸೋಂಕು ಉಂಟುಮಾಡುತ್ತದೆ. ಹೀಗಾಗಿ ಆರಂಭಿಕ ಹಂತದಲ್ಲಿಯೇ ರೋಗಬಾಧೆಯನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ರೋಗ ನಿರ್ವಹಣೆಗೆ ಸಲಹೆಗಳು:
ಹಳದಿ ನಂಜುರೋಗದಿಂದ ಬಾಧಿತ ಗಿಡಗಳನ್ನು ಹೊಲದಿಂದ ಕಿತ್ತು ಹೊರತೆಗೆದು ನಾಶಪಡಿಸಬೇಕು. ಪ್ರತಿ ಎಕರೆಗೆ 8ರಿಂದ 10 ಹಳದಿ ಅಂಟು ಬಲೆಗಳನ್ನು ಬೆಳೆಗಿಂತ ಸುಮಾರು ಒಂದು ಅಡಿ ಎತ್ತರದಲ್ಲಿ ಅಳವಡಿಸಬೇಕು.
ರಸಹೀರುವ ಕೀಟಗಳ ನಿಯಂತ್ರಣಕ್ಕಾಗಿ ಇಮಿಡಾಕ್ಲೋಪ್ರಿಡ್ ಅಥವಾ ಥಯಾಮೆಥಾಕ್ಸಮ್ 0.3 ಗ್ರಾಂ ಅಥವಾ ಅಸಿಫೇಟ್ 1 ಗ್ರಾಂ ಜೊತೆಗೆ ಸ್ಟಿಕ್ಕರ್ (ಅಂಟು) 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದರೊಂದಿಗೆ 19:19:19 ನೀರಿನಲ್ಲಿ ಕರಗುವ ರಸಗೊಬ್ಬರವನ್ನು 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು. ಇದೇ ಸಿಂಪರಣೆಯನ್ನು 15 ದಿನಗಳ ಬಳಿಕ ಮತ್ತೊಮ್ಮೆ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಸೋಯಾಬೀನ್ ಬೆಳೆಯಲ್ಲಿ ಕಾಯಿಕೊರಕ ಹಾಗೂ ಕಾಂಡಕೊರಕ ಹುಳುಗಳ ನಿಯಂತ್ರಣಕ್ಕಾಗಿ ಥಯಾಮೆಥಾಕ್ಸಮ್ 12.6% + ಲ್ಯಾಂಬ್ಡಾ ಸೈಹ್ಯಾಲೋಥ್ರೀನ್ 9.5% ಎಸ್‌ಸಿ ಕೀಟನಾಶಕವನ್ನು 16 ಲೀಟರ್ ಸಾಮರ್ಥ್ಯದ ಪಂಪ್‌ಗೆ 15ರಿಂದ 20 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬೇಕು.
ಇತರೆ ರಸಹೀರುವ ಕೀಟಗಳ ನಿಯಂತ್ರಣಕ್ಕೆ ಅಸಿಟಾಮಿಪ್ರಿಡ್ 20% ಎಸ್‌ಪಿ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಗೂ 19:19:19 ನೀರಿನಲ್ಲಿ ಕರಗುವ ರಸಗೊಬ್ಬರವನ್ನು 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಈ ಕುರಿತು ಕೃಷಿ ವಿಜ್ಞಾನ ಕೇಂದ್ರದ ಎ.ಇ.ಇ.ಸಿ. ಮುಂದಾಳು ಡಾ. ಆರ್.ಎಲ್. ಜಾಧವ ಅವರು ರೈತರಿಗೆ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ರೈತರು ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಕೃಷಿ ಇಲಾಖೆ ಕಚೇರಿ ಅಥವಾ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ಸೂಕ್ತ ಮಾರ್ಗದರ್ಶನ ಪಡೆದು ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.