ಶಾಂತರಸರು ಕೇವಲ ಸಾಹಿತಿಯಲ್ಲ, ಹೋರಾಟದ ಧೀಮಂತ ಧ್ವನಿ: ಬಿ. ವೆಂಕಟ ಸಿಂಗ್
‘ಸಣ್ಣಗೌಡಸಾನಿ’ ನಾಟಕ ಪ್ರದರ್ಶನಕ್ಕೆ ಚಾಲನೆ
ಕಲಬುರಗಿ: ನಾಡೋಜ ಡಾ. ಶಾಂತರಸರು ಕೇವಲ ಸಾಹಿತಿಯಾಗಿರಲಿಲ್ಲ. ನೆಲ, ಜಲ, ಭಾಷೆ ಹಾಗೂ ಪರಿಸರದ ಪರವಾಗಿ ಧ್ವನಿ ಎತ್ತಿದ ಹೋರಾಟಗಾರರಾಗಿದ್ದರು. ಈ ಭಾಗಕ್ಕೆ ಯಾವುದೇ ರೀತಿಯ ಅನ್ಯಾಯವಾದಾಗ ಅದನ್ನು ಖಂಡಿಸಿ ಪ್ರತಿಭಟಿಸುವ ಧೀಮಂತ ಮನೋಭಾವ ಅವರಲ್ಲಿತ್ತು ಎಂದು ಮಾಹಿತಿ ಆಯೋಗದ ಕಲಬುರಗಿ ಪೀಠದ ಅಧ್ಯಕ್ಷ ಬಿ. ವೆಂಕಟ ಸಿಂಗ್ ಹೇಳಿದರು.
ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸೋಮವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ, ಕಲಬುರಗಿ ಇವರುಗಳ ಸಹಯೋಗದಲ್ಲಿ ನಾಡೋಜ ಡಾ. ಶಾಂತರಸರ ‘ಸಣ್ಣಗೌಡಸಾನಿ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಂತರಸರ ಊರು ಹಾಗೂ ತಮ್ಮ ಊರು ಅಕ್ಕಪಕ್ಕದಲ್ಲಿದ್ದು, ಬಾಲ್ಯದಿಂದಲೂ ಅವರೊಂದಿಗೆ ಒಡನಾಟ ಹೊಂದಿದ್ದೇನೆ. 1988ರಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಾಂತರಸರೊಂದಿಗೆ ನಿಕಟ ಸಂಪರ್ಕವಿತ್ತು. ಆಗಲೇ ಅವರಲ್ಲಿದ್ದ ಪ್ರತಿಭಟನಾ ಮನೋಭಾವ, ಸಾಮಾಜಿಕ ಕಳಕಳಿ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಗುಣವನ್ನು ಹತ್ತಿರದಿಂದ ಕಂಡಿದ್ದೇನೆ ಎಂದು ಸ್ಮರಿಸಿದರು.
ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ಶಾಂತರಸರು ಸದಾ ರಾಜಿಯಾಗದ ನಿಲುವು ಹೊಂದಿದ್ದರು. ಈ ಭಾಗಕ್ಕೆ ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾದರೂ ಅದರ ವಿರುದ್ಧ ಧ್ವನಿ ಎತ್ತುತ್ತಿದ್ದರು. ತಮ್ಮ ಸ್ವಂತ ನಿವೇಶನವನ್ನೇ ಮಾರಿ ಬಂಡಾಯದ ಚಳವಳಿಗಳಿಗೆ ಬೆಂಬಲ ನೀಡಿದ ವಿಶಿಷ್ಟ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು.
ಶಾಂತರಸರು ಕೇವಲ ಸಾಹಿತಿಯಾಗಿರದೆ ಪರಿಸರ ಪ್ರೇಮಿಯೂ ಆಗಿದ್ದರು. ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ದ ಸಂದರ್ಭದಲ್ಲಿ ಪತ್ನಿಯೊಂದಿಗೆ ‘ಅಪ್ಪಿಕೋ’ ಚಳವಳಿಯಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಗೆ ಹೋರಾಡಿದ್ದರು. ಅವರ ಸಾಹಿತ್ಯದಲ್ಲಿ ಬಂಡಾಯದ ಧ್ವನಿಯೊಂದಿಗೆ ಗಜಲ್ ಸಾಹಿತ್ಯಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಪಿ. ಲಂಕೇಶ್ ಅವರ ಪತ್ರಿಕೆಯಲ್ಲಿ ತಮ್ಮ ಕವನ ಪ್ರಕಟವಾಗದ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿ ರಾಯಚೂರಿನಲ್ಲಿ ಕವನ ಸಂಕಲನ ಪ್ರಕಟಿಸಿದ ಶಾಂತರಸರ ಆತ್ಮವಿಶ್ವಾಸ ಮತ್ತು ಸೃಜನಶೀಲತೆ ಗಮನಾರ್ಹ. ‘ಅಮರೇಶ ನುಗಡೋಣಿ’ ಸೇರಿದಂತೆ ಈ ಭಾಗದ ಬಂಡಾಯ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದಾಗ ಅದನ್ನು ತಿರಸ್ಕರಿಸುವ ಮೂಲಕ ತಮ್ಮ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಶಾಂತರಸರು ತೋರಿಸಿದ್ದರು. ಜನಪರ ವಿಚಾರಗಳಿಗಾಗಿ ವಿಶಿಷ್ಟ ರೀತಿಯ ಚಳವಳಿಗಳನ್ನು ರೂಪಿಸಿ ಹೋರಾಟ ನಡೆಸಿದ ಅವರು, ನಾಡು-ನುಡಿ ಮತ್ತು ಜನರ ಹಿತಕ್ಕಾಗಿ ಸದಾ ಬದ್ಧರಾಗಿದ್ದರು ಎಂದು ಬಿ. ವೆಂಕಟ ಸಿಂಗ್ ಹೇಳಿದರು.
ಶಾಂತರಸರ ಕಾದಂಬರಿಯನ್ನು ಆಧರಿಸಿದ ‘ಸಣ್ಣಗೌಡಸಾನಿ’ ನಾಟಕದ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿರುವುದು ಹೆಮ್ಮೆಯ ಕ್ಷಣವಾಗಿದೆ. ಅವರ ಸಾಹಿತ್ಯ ಮತ್ತು ಹೋರಾಟದ ಪರಂಪರೆಯನ್ನು ರಂಗಭೂಮಿಯ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನ ಶ್ಲಾಘನೀಯ ಎಂದರು.
ಗಜಲ್, ರಂಗಗೀತೆಗಳ ಗಾಯನ:
‘ಸಣ್ಣಗೌಡಸಾನಿ’ ನಾಟಕದ ರಂಗಗೀತೆಗಳು ಹಾಗೂ ಶಾಂತರಸರ ಗಜಲ್‌ಗಳನ್ನು ಧಾರವಾಡದ ರಾಘವ ಕಮ್ಮಾರ ಮತ್ತು ತಂಡ ಗಾಯನ ರೂಪದಲ್ಲಿ ಪ್ರಸ್ತುತಪಡಿಸಿದರು.
ಬಾಗಲಕೋಟೆ ರಂಗಸಮಾಜದ ಸದಸ್ಯ ಮಹಾಂತೇಶ ಎಂ. ಗಜೇಂದ್ರಗಡ, ಕರ್ನಾಟಕ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಪತ್ರಕರ್ತ ಶೇಷಮೂರ್ತಿ ಅವಧಾನಿ, ಮಹಾಂತೇಶ ನವಲಕಲ್, ನಾಟಕದ ರಂಗಪಠ್ಯ, ವಸ್ತು ವಿನ್ಯಾಸ ಹಾಗೂ ನಿರ್ದೇಶಕ ಪ್ರವೀಣ ರೆಡ್ಡಿ ಗುಂಜನಹಳ್ಳಿ ವೇದಿಕೆಯಲ್ಲಿದ್ದರು.
ನಾಟಕದ ರಂಗಸಜ್ಜಿಕೆ ಹಾಗೂ ರಂಗಪರಿಕರಗಳ ಜವಾಬ್ದಾರಿಯನ್ನು ರಾಜಕುಮಾರ್ ಎಸ್.ಕೆ. ವಹಿಸಿದ್ದು, ಬೆಳಕು ಹಾಗೂ ಸಹ ನಿರ್ದೇಶನವನ್ನು ಶ್ರೀನಿವಾಸ ದೋರನಹಳ್ಳಿ ನಿರ್ವಹಿಸಿದರು. ರಂಗಪಠ್ಯ, ವಸ್ತು ವಿನ್ಯಾಸ ಹಾಗೂ ನಿರ್ದೇಶನವನ್ನು ಪ್ರವೀಣ ರೆಡ್ಡಿ ಗುಂಜನಹಳ್ಳಿ ನಿರ್ವಹಿಸಿದ್ದಾರೆ.