Kalaburagi | ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ವಂಚನೆ: ಇಬ್ಬರು ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
ಕಲಬುರಗಿ: ಸರ್ಕಾರಿ ಇಲಾಖೆಗಳಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರು ಹಾಗೂ ನಿರುದ್ಯೋಗಿ ಯುವಕರಿಗೆ ವಂಚನೆ ಎಸಗುತ್ತಿದ್ದ ಆರೋಪದಲ್ಲಿ ರಾಘವೇಂದ್ರ ನಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಿಹಾರ ಮೂಲದ ಪ್ರೇಮಶಾಮಕುಮಾರ (32) ಹಾಗೂ ಜಗನ್ನಾಥ ಸಿಂಗ್ ಪ್ರಸಾದ್ (40) ಬಂಧಿತ ಆರೋಪಿಗಳು. ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್‌ಗಳು, ಎಟಿಎಂ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು ಹಾಗೂ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜಾದ್‌ಪುರ ರಸ್ತೆಯ ನಿವಾಸಿ ಅಶ್ರಫ್ (35) ಎಂಬವರು ನೀಡಿದ ದೂರಿನ ಮೇರೆಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ದೂರಿನ ಪ್ರಕಾರ, ಆರೋಪಿಗಳು ರೈಲ್ವೆ ಇಲಾಖೆ, ಅಂಚೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಕರ್ನಾಟಕ, ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ, ಒಬ್ಬ ಅಭ್ಯರ್ಥಿಯಿಂದ 5 ಲಕ್ಷ ರೂ. ಪಡೆದು ಉದ್ಯೋಗ ಕಲ್ಪಿಸುವುದಾಗಿ ನಂಬಿಸಿ ವಂಚನೆ ನಡೆಸುತ್ತಿದ್ದರು ಎನ್ನಲಾಗಿದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಐಪಿಎಸ್, ಉಪ ಪೊಲೀಸ್ ಆಯುಕ್ತೆ ಶಾಲೂ ಐಪಿಎಸ್ (ಕಾನೂನು ಮತ್ತು ಸುವ್ಯವಸ್ಥೆ), ಡಿಸಿಪಿ (ಅಪರಾಧ ಮತ್ತು ಸಂಚಾರ) ಪ್ರವೀಣ ಎಚ್. ನಾಯಕ ಹಾಗೂ ದಕ್ಷಿಣ ಉಪವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ರಾಘವೇಂದ್ರ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ. ವಾಜೀದ್ ಪಟೇಲ್ ಅವರ ನೇತೃತ್ವದಲ್ಲಿ ಎಎಸ್‌ಐ ಮಲ್ಲಿಕಾರ್ಜುನ ಜಾನೆ, ಹೆಡ್ ಕಾನ್ಸ್‌ಟೇಬಲ್ ಮಲ್ಲನಗೌಡ ಹಾಗೂ ಸಿಬ್ಬಂದಿಗಳಾದ ಉಮೇಶ್, ಶರಣುಬಸವ, ಅರೆಶ್, ಪ್ರಶಾಂತ್ ಮತ್ತು ಬಸವರಾಜ್ ಅವರನ್ನೊಳಗೊಂಡ ತಂಡ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಿತು.
ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ. ವಾಜೀದ್ ಪಟೇಲ್ ಹಾಗೂ ಅವರ ಸಿಬ್ಬಂದಿಗಳ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಶ್ಲಾಘಿಸಿದ್ದಾರೆ.
ಸರ್ಕಾರಿ ನೌಕರಿ ಕೊಡಿಸುವ ಹೆಸರಿನಲ್ಲಿ ಹಣ ಕೇಳುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು, ವಿಶೇಷವಾಗಿ ನಿರುದ್ಯೋಗಿ ಯುವಕರು ಎಚ್ಚರಿಕೆಯಿಂದಿರಬೇಕು. ಉದ್ಯೋಗದ ಆಮಿಷವೊಡ್ಡಿ ಹಣ ವಸೂಲಿ ಮಾಡುವ ವ್ಯಕ್ತಿಗಳಿಂದ ದೂರವಿದ್ದು, ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.