×
Ad

Kalaburagi | ವಾಡಿಗೆ ಸರ್ಕಾರಿ ಪಿಯು ಕಾಲೇಜು ಮಂಜೂರು: ಸಿಹಿ ಹಂಚಿ ವಿಜಯೋತ್ಸವ

Update: 2026-06-04 21:37 IST

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು (ಪಿಯು ಕಾಲೇಜು) ಮಂಜೂರಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಎಐಡಿಎಸ್‌ಒ (AIDSO) ಮತ್ತು ಎಐಡಿವೈಒ (AIDYO) ಸಂಘಟನೆಗಳ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ನೂರಾರು ಜನರು ಭಾಗವಹಿಸಿ ತಮ್ಮ ಸಂತಸ ವ್ಯಕ್ತಪಡಿಸಿದರು.

ಕಳೆದ ಎರಡು ದಶಕಗಳಿಂದ ವಾಡಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುತ್ತಿತ್ತು. ಈ ಹೋರಾಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ವಾಡಿ ಪಟ್ಟಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿರುವುದು ಹೋರಾಟಗಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, “ವಾಡಿ ಪಟ್ಟಣಕ್ಕೆ ಈ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಪಿಯು ಕಾಲೇಜು ಆರಂಭಿಸಲು ಸರ್ಕಾರ ಆದೇಶ ಹೊರಡಿಸಿರುವುದು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಕಳೆದ 20 ವರ್ಷಗಳಿಂದ ನಡೆಸಿದ ನಿರಂತರ ಹೋರಾಟಕ್ಕೆ ದೊರೆತ ನ್ಯಾಯಸಮ್ಮತ ಜಯವಾಗಿದೆ” ಎಂದು ಹೇಳಿದರು.

“ಗ್ರಾಮೀಣ ಹಾಗೂ ಕಾರ್ಮಿಕ ಕುಟುಂಬಗಳ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ತೆರಳಬೇಕಾಗುತ್ತಿತ್ತು. ಆರ್ಥಿಕ ಸಮಸ್ಯೆಗಳ ಕಾರಣದಿಂದ ಅನೇಕ ವಿದ್ಯಾರ್ಥಿಗಳು, ವಿಶೇಷವಾಗಿ ಹೆಣ್ಣುಮಕ್ಕಳು, ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಕಾಲೇಜು ಸ್ಥಾಪನೆಗಾಗಿ ಹಲವು ವರ್ಷಗಳಿಂದ ಪ್ರತಿಭಟನೆಗಳು, ಧರಣಿಗಳು, ಮನವಿ ಪತ್ರಗಳ ಸಲ್ಲಿಕೆ ಸೇರಿದಂತೆ ವಿವಿಧ ಹೋರಾಟಗಳನ್ನು ನಡೆಸಲಾಗಿತ್ತು. ಸಾವಿರಾರು ಸಾರ್ವಜನಿಕರ ಬೆಂಬಲದೊಂದಿಗೆ ನಡೆದ ಈ ಜನಾಂದೋಲನದ ಫಲವಾಗಿ ಇಂದು ವಾಡಿಗೆ ಸರ್ಕಾರಿ ಕಾಲೇಜು ಮಂಜೂರಾಗಿದೆ. ‘ಹೋರಾಟದಲ್ಲಿ ಶಕ್ತಿಯಿದೆ’ ಎಂಬುದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಅವರು ಹೇಳಿದರು.

ಕಾರ್ಮಿಕ ಮುಖಂಡ ಶರಣು ಹೇರೂರು ಮಾತನಾಡಿ, “ಸರ್ಕಾರಿ ಪಿಯು ಕಾಲೇಜು ಮಂಜೂರಾಗಿರುವುದು ಈ ಭಾಗದ ಜನರ ಬಹುಕಾಲದ ಕನಸಿನ ನನಸಾಗಿದೆ. ಆದರೆ ಸರ್ಕಾರ ಕೇವಲ ಆದೇಶ ನೀಡುವುದರಲ್ಲಿ ಸೀಮಿತವಾಗದೆ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತರಗತಿಗಳನ್ನು ಆರಂಭಿಸಬೇಕು. ಅರ್ಹ ಉಪನ್ಯಾಸಕರ ನೇಮಕ, ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು” ಎಂದು ಆಗ್ರಹಿಸಿದರು.

ಕಾಲೇಜಿನ ಶೀಘ್ರ ಆರಂಭ ಹಾಗೂ ಮೂಲಸೌಕರ್ಯಗಳ ಕಲ್ಪನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ವಿಜಯೋತ್ಸವ ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷ ಗೋವಿಂದ ಯಳವರ, ಎಐಡಿವೈಒ ವಾಡಿ ಉಪಾಧ್ಯಕ್ಷ ರಾಜು ವಡೆಯರ್, ದತ್ತಾತ್ರೇಯ ಹುಡೆಕರ್, ಅಲ್ಲಾಭಕಾಶ್, ಚಂದ್ರಕಾಂತ್ ಪಗಲಪುರ್, ಶ್ರೀಶೈಲ್ ಕಡಗೂರು, ವಿಠ್ಠಲ್ ರಾಟೋಡ್, ಸಿದ್ದಯ್ಯ ಶಾಸ್ತ್ರಿ, ಆರ್.ಎನ್. ಆನಂದ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News