ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯ ಪರಿಗಣಿಸಲು ಹೈಕೋರ್ಟ್ ಆದೇಶಿಸಿದೆ : ಡಾ. ಮಲ್ಲಿಕಾರ್ಜುನ ಡೊಣ್ಣೂರ್

Update: 2026-07-26 19:02 IST

ಕಲಬುರಗಿ: ಅನುದಾನಿತ ಶಾಲಾ ಮತ್ತು ಕಾಲೇಜುಗಳ ನೌಕರರ ಬಹುಕಾಲದ ಬೇಡಿಕೆಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಮನ್ನಣೆ ನೀಡಿದ್ದು, ಅನುದಾನ ರಹಿತ (Unaided) ಅವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಪಿಂಚಣಿ ಸೇರಿದಂತೆ ವಿವಿಧ ಸೇವಾ ಸೌಲಭ್ಯಗಳಿಗೆ ಪರಿಗಣಿಸಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ಸದಸ್ಯ ಪೀಠ ಆದೇಶಿಸಿದೆ ಎಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಮಲ್ಲಿಕಾರ್ಜುನ ಡೊಣ್ಣೂರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನುದಾನ ರಹಿತ ಸೇವಾ ಅವಧಿಯನ್ನು ಪಿಂಚಣಿ, ರಜಾ ಸೌಲಭ್ಯ, ಭಡ್ತಿ/ಕಾಲಮಿತಿ ಭಡ್ತಿ ಹಾಗೂ ಇತರೆ ಆರ್ಥಿಕ ಸೌಲಭ್ಯಗಳ ಲೆಕ್ಕಾಚಾರಕ್ಕೆ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿರುವುದು ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಾವಿರಾರು ನೌಕರರಿಗೆ ಮಹತ್ವದ ನಿರಾಳತೆಯನ್ನು ತಂದಿದೆ ಎಂದು ಅವರು ಹೇಳಿದ್ದಾರೆ.

ಸುಮಾರು 20 ವರ್ಷಗಳಿಂದ ನ್ಯಾಯಕ್ಕಾಗಿ ನಿರಂತರವಾಗಿ ನಡೆದ ಕಾನೂನು ಹೋರಾಟಕ್ಕೆ ಈ ತೀರ್ಪು ನ್ಯಾಯ ದೊರಕಿಸಿದಂತಾಗಿದೆ. ನೌಕರರ ತಾಳ್ಮೆ, ಸಂಘಟಿತ ಹೋರಾಟ ಹಾಗೂ ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಇದು ಸಂದ ಜಯವಾಗಿದೆ ಎಂದು ಡಾ. ಮಲ್ಲಿಕಾರ್ಜುನ ಡೊಣ್ಣೂರ್ ಅಭಿಪ್ರಾಯಪಟ್ಟಿದ್ದಾರೆ.

ಈ ಕಾನೂನು ಹೋರಾಟದಲ್ಲಿ ಅವಿರತವಾಗಿ ಶ್ರಮಿಸಿದ ಎಚ್. ನಾಗರಾಜಪ್ಪ, ಲೋಕೇಶ್ ತಾಳಿಕೋಟೆ ಹಾಗೂ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ ಅವರ ಸೇವೆಯನ್ನು ಅವರು ಸ್ಮರಿಸಿ, ರಾಜ್ಯದ ಎಲ್ಲ ಪಿಂಚಣಿ ವಂಚಿತ ನೌಕರರ ಪರವಾಗಿ ಹೃತ್ಪೂರ್ವಕ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ.

ಇದೇ ವೇಳೆ, ಹೈಕೋರ್ಟ್‌ನ ತೀರ್ಪಿನ ಆಶಯವನ್ನು ಸರ್ಕಾರ ವಿಳಂಬವಿಲ್ಲದೆ ಜಾರಿಗೆ ತಂದು, ಅರ್ಹ ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಪಿಂಚಣಿ ಸೇರಿದಂತೆ ಎಲ್ಲ ಸೇವಾ ಸೌಲಭ್ಯಗಳನ್ನು ಶೀಘ್ರವಾಗಿ ಕಲ್ಪಿಸಬೇಕೆಂದು ಪ್ರಕಟಣೆಯಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News