ಕಲಬುರಗಿ | ಅಪ್ಪನ ಒಡನಾಟ ಕೃತಿ ಬಿಡುಗಡೆ, ಬಸವ ಮಾರ್ಗ ಪ್ರಶಸ್ತಿ ಪ್ರದಾನ
ಕಲಬುರಗಿ: ‘ಶಾಲಾ ಶಿಕ್ಷಕರಾಗಿ, ಪತ್ರಕರ್ತರಾಗಿ ದಿಟ್ಟತನದಿಂದ ರಾಜಕಾರಣಿಗಳ ಅಕ್ರಮಗಳು, ರೈತರ ಬವಣೆಗಳ ಬಗ್ಗೆ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ದಿ.ಲಿಂಗಣ್ಣ ಸತ್ಯಂಪೇಟೆ ಅವರಿಗೆ ಸಾಕಷ್ಟು ಕಿರುಕುಳ ನೀಡಿದರೂ ವಿಚಲಿತರಾಗಿರಲಿಲ್ಲ’ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಅವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.
ಶರಣಮಾರ್ಗ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗಣ್ಣ ಸತ್ಯಂಪೇಟೆಯವರ 14ನೇ ಸಂಸ್ಮರಣೆ, ಬಸವಮಾರ್ಗ ಪ್ರಶಸ್ತಿ ಪ್ರದಾನ ಹಾಗೂ ‘ಅಪ್ಪನ ಒಡನಾಟ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅವರ ಪತ್ನಿ, ಮಕ್ಕಳನ್ನು ಬಿಟ್ಟರೆ ಲಿಂಗಣ್ಣ ಅವರಿಗೆ ಅತಿ ಹತ್ತಿರವಾಗಿದ್ದು ನಾನೇ. ಶಾಲಾ ಶಿಕ್ಷಕರಾಗಿದ್ದ ಅವರು ನಿರ್ಭೀತಿಯಿಂದ ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಕೆಲ ವರದಿಗಳಿಗೆ ಸಂಬಂಧಿಸಿದಂತೆ ಪಿ.ಲಂಕೇಶ್ ಅವರನ್ನೂ ಎದುರು ಹಾಕಿಕೊಂಡಿದ್ದರು. ಅವರ ವೈಚಾರಿಕತೆ ಹಾಗೂ ಪ್ರಖರ ಬರವಣಿಗೆಯಿಂದಾಗಿ ಹಲವು ಬಾರಿ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದರು. ಸೇವೆಯಿಂದ ಅಮಾನತುಗೊಂಡಿದ್ದರು. ಅಂತಹ ಸಂದರ್ಭದಲ್ಲಿ ಅವರ ವರ್ಗಾವಣೆ, ಅಮಾನತು ಆದೇಶವನ್ನು ವಾಪಸ್ ಪಡೆಯುವಂತೆ ಮಾಡಿದ್ದೆ’ ಎಂದರು.
ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ಬಸವ ತತ್ವ ಅನುಯಾಯಿಯಾಗಿದ್ದ ಲಿಂಗಣ್ಣ ಸತ್ಯಂಪೇಟೆ ಅವರು ಅಣುಬಾಂಬಿನಂತಿದ್ದರು. ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದರು. ಈ ಭಾಗದ ರಾಜಕಾರಣಿಗಳು, ಮಠಾಧೀಶರ ಅಕ್ರಮಗಳನ್ನು ನಿರ್ಭಿಡೆಯಿಂದ ಬಯಲುಗೊಳಿಸುತ್ತಿದ್ದರು ಎಂದರು.
ಲಿಂಗಣ್ಣ ಅವರ ಪುತ್ರ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ‘ತಂದೆಯವರು ಆರಂಭಿಸಿದ್ದ ಬಸವ ಮಾರ್ಗ ಪತ್ರಿಕೆ ಒಂದು ಕಾಲಕ್ಕೆ 25 ಸಾವಿರ ಪ್ರತಿ ಮಾರಾಟವಾಗುತ್ತಿತ್ತು. ಚಂದಾ ಕೊಡಲಿ, ಬಿಡಲಿ ಯಾರಾದರೂ ಪರಿಚಯವಾದರೆ ಸಾಕು ಅವರ ಮನೆಗೆ ಪತ್ರಿಕೆ ಕಳಿಸುತ್ತಿದ್ದರು. ಲಾಭ ನಷ್ಟದ ಲೆಕ್ಕಾಚಾರ ಮಾಡುತ್ತಿರಲಿಲ್ಲ. ಪತ್ರಿಕೆ ಅಚ್ಚಿಗೆ ಹೋಗುವವರೆಗೂ ಕೆಲ ತಿದ್ದುಪಡಿಗಳನ್ನು ಮಾಡುತ್ತಲೇ ಇರುತ್ತಿದ್ದರು’ ಎಂದರು.
ಸಾನ್ನಿಧ್ಯ ವಹಿಸಿದ್ದ ಮುದಗಲ್ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಮಾತನಾಡಿ, ‘ಲಿಂಗಣ್ಣ ಅವರು ಇಳಕಲ್ ಮಹಾಂತ ಅಪ್ಪಗಳ ಅನುಯಾಯಿಯಾಗಿದ್ದರು. ಹಲವು ಬಾರಿ ಇಳಕಲ್‌ಗೆ ಬಂದಾಗ ಅವರೊಂದಿಗೇ ನಾನೇ ಇರುತ್ತಿದ್ದೆ. ಇಳಕಲ್ ಶ್ರೀಗಳು ಸತ್ಯಂಪೇಟೆವರೆಗೆ ಎರಡು ಬಾರಿ ಪಾದಯಾತ್ರೆ ಮಾಡಿದ್ದರು. ಹಾದಿಯಲ್ಲಿ ಶರಣತತ್ವದ ಬಗ್ಗೆ ಪ್ರಚಾರ ಮಾಡಿದ್ದರು. ಸಿಂಧನೂರು ಕಡೆ ಲಿಂಗಣ್ಣ ಅವರು ಬಂದಾಗ ಕಂಡ ಬಸ್ ಹತ್ತಿ ಆ ಊರಿಗೆ ಹೋಗಿ ಜನರನ್ನು ಭೇಟಿ ಮಾಡುತ್ತಿದ್ದೆವು. ಬೈಕ್‌ನಲ್ಲಿಯೂ ಹಲವು ಬಾರಿ ಗ್ರಾಮಗಳಿಗೆ ಸಂಚರಿಸಿದ್ದೇವೆ. ಲಿಂಗಣ್ಣ ಅವರು ನಿಜವಾದ ಶರಣ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿ ಡಾ.ಬಿ.ಎಸ್.ಸುಧಾಕರ್ ಅವರಿಗೆ ರಾಜ್ಯಮಟ್ಟದ ಬಸವ ಮಾರ್ಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲಿಂಗಣ್ಣ ಅವರ ಇನ್ನೋರ್ವ ಪುತ್ರ, ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂತೋಷ ಸತ್ಯಂಪೇಟೆ ಅವರು ಬರೆದ ಅಪ್ಪನ ಒಡನಾಟ ಕೃತಿಯನ್ನು ಹಾಗೂ ಶರಣ ಮಾರ್ಗ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಶಾಸಕ ಬಿ.ಆರ್.ಪಾಟೀಲ ಬಿಡುಗಡೆಗೊಳಿಸಿದರು. ಅಶೋಕ ದೊಡ್ಡಮನಿ ಕೃತಿ ಪರಿಚಯ ಮಾಡಿದರು.
ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ ಸೇರಿದಂತೆ ಇತರರಯ ವೇದಿಕೆಯಲ್ಲಿದ್ದರು. ಸುರೇಶ ಬಡಿಗೇರ ನಿರೂಪಿಸಿದರು.