ಸಚಿವ ಸ್ಥಾನ ಸಿಗದಿದ್ದಕ್ಕೆ ನೋವಿದೆ, ಆದರೆ ಹತಾಶನಾಗಿಲ್ಲ: ಶಾಸಕ ಬಿ.ಆರ್.ಪಾಟೀಲ್

Update: 2026-08-04 23:28 IST

ಬಿ.ಆರ್.ಪಾಟೀಲ್

ಕಲಬುರಗಿ : ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ನೋವಾಗಿದೆ. ಆದರೆ ಹತಾಶನಾಗಿಲ್ಲ ಎಂದು ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರು ವ್ಯಕ್ತಪಡಿಸಿರುವ ಬೇಸರಕ್ಕೆ ಕೃತಜ್ಞತೆ ಸಲ್ಲಿಸಿದರು.

ಮಹಾತ್ಮ ಗಾಂಧಿ, ರಾಮ ಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ಕಳೆದ 50 ವರ್ಷಗಳಿಂದ ರಾಜಕೀಯ ಮತ್ತು ಸಮಾಜಮುಖಿ ಹೋರಾಟ ನಡೆಸಿದ್ದೇನೆ. ಸಮಾಜವಾದಿ ಚಿಂತನೆಗೆ ಬದ್ಧನಾಗಿ ಮೂಢನಂಬಿಕೆ, ಜಾತಿ ವ್ಯವಸ್ಥೆ, ಬಡತನ, ನಿರುದ್ಯೋಗ ಹಾಗೂ ಅಸಮಾನತೆ ವಿರುದ್ಧ ಹೋರಾಡುತ್ತಾ ಮಹಿಳಾ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದೇನೆ ಎಂದು ಹೇಳಿದರು.

ತಮ್ಮ ರಾಜಕೀಯ ಜೀವನದಲ್ಲಿ ನಾಲ್ಕು ಬಾರಿ ಶಾಸಕರಾಗಿ, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದು, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದೇನೆ ಎಂದು ಅವರು ಉಲ್ಲೇಖಿಸಿದ್ದಾರೆ.

ರೈತ, ಕಾರ್ಮಿಕ, ಪರಿಸರ, ದಲಿತ ಹಾಗೂ ಅಹಿಂದ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಸಿಎಎ-ಎನ್‌ಆರ್‌ಸಿ, ರೈತರ ಹೋರಾಟ, ಎಸ್‌ಐಆರ್ ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಗಳಲ್ಲೂ ಪಾಲ್ಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಅಕ್ರಮ (ವೋಟ್ ಚೋರಿ) ಪ್ರಕರಣವನ್ನು ಬೆಳಕಿಗೆ ತಂದಿದ್ದು, ಅದರ ಮಾಹಿತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿದ್ದೇನೆ. ಅದು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಬಲ ತುಂಬಿದೆ ಎಂದು ತಿಳಿಸಿದರು.

ಇಷ್ಟೆಲ್ಲ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಶ್ರಮಿಸಿದ ಬಳಿಕವೂ ತಮ್ಮನ್ನು ಸಂಪುಟದಿಂದ ಹೊರಗಿಟ್ಟಿರುವುದು ಸರಿಯೇ ಎಂಬುದನ್ನು ರಾಜ್ಯದ ಜನರ ವಿವೇಚನೆಗೆ ಬಿಡುತ್ತೇನೆ ಎಂದು ಬಿ.ಆರ್.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News