ಜೇವರ್ಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಅಡಿಯಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ‘ಅವ್ವ’ ನಾಟಕದ ಏಕವ್ಯಕ್ತಿ ಪ್ರದರ್ಶನ ನಡೆಯಿತು.

‘ಅವ್ವ’ ನಾಟಕದ ಕರ್ತೃ ಹಾಗೂ ನೀನಾಸಂ ಕಲಾವಿದ ರಮಜಾನಸಾಬ್ ಉಳ್ಳಾಗಡ್ಡಿ ಅವರು ಏಕವ್ಯಕ್ತಿ ಪ್ರದರ್ಶನ ನೀಡಿದರು. ತಮ್ಮ ನಟನಾ ಕೌಶಲ ಹಾಗೂ ಭಾವಪೂರ್ಣ ಅಭಿನಯದ ಮೂಲಕ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಸುಮಾರು ಒಂದು ಗಂಟೆ ಕಾಲ ನಡೆದ ಪ್ರದರ್ಶನ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಆಧುನಿಕ ಯುಗದಲ್ಲಿ ತಾಯಿ-ಮಕ್ಕಳ ನಡುವಿನ ಸಂಬಂಧಗಳು ದೂರವಾಗುತ್ತಿರುವುದು, ಹೆತ್ತ ತಂದೆ-ತಾಯಿಯನ್ನು ಪೋಷಿಸಬೇಕಾದ ವಿದ್ಯಾವಂತರೇ ಅವರನ್ನು ಅನಾಥಾಶ್ರಮಗಳಿಗೆ ಸೇರಿಸುತ್ತಿರುವುದು ಸೇರಿದಂತೆ ನಾಟಕದಲ್ಲಿ ಮೂಡಿಬಂದ ಸನ್ನಿವೇಶಗಳು ಪ್ರೇಕ್ಷಕರನ್ನು ಗಂಭೀರ ಚಿಂತನೆಗೆ ಹಚ್ಚಿದವು. ತಾಯಿಯ ಮಮತೆ, ಕೌಟುಂಬಿಕ ಸಂಬಂಧಗಳು ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ನಾಟಕ ಪರಿಣಾಮಕಾರಿಯಾಗಿ ಬಿಂಬಿಸಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಾ ಅಸ್ಟಿಗೆ ಮಾತನಾಡಿ, ನಾಟಕದ ಪ್ರದರ್ಶನ ಅತ್ಯಂತ ಮನೋಜ್ಞವಾಗಿತ್ತು. ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿದ್ದು, ಯುವಜನಾಂಗಕ್ಕೆ ಮಾನವೀಯತೆಯ ಸಂದೇಶ ಸಾರುವ ಇಂತಹ ಪ್ರದರ್ಶನಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಐಕ್ಯೂಎಸಿ ಸಂಯೋಜಕ ಡಾ. ಸಂದೀಪ ತಿವಾರಿ, ಸಿಬ್ಬಂದಿ ಕಾರ್ಯದರ್ಶಿ ಡಾ. ಸಂತೋಷ ಕುಮಾರ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಶರಣಪ್ಪ ಗುಂಡಗುರ್ತಿ, ಹಿರಿಯ ಪ್ರಾಧ್ಯಾಪಕರಾದ ಡಾ. ರಾಬಿಯಾಬೇಗಂ, ಡಾ. ಅಶೋಕ ಹೋಳ್ಕರ್, ಡಾ. ಹೊನ್ನೂರಸ್ವಾಮಿ, ಮೋಹನ್ ಬೈಲ್ ಪತ್ತಾರ, ಡಾ. ಅಪರ್ಣಾ, ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ, ಡಾ. ಶ್ರೀಧರ್, ಡಾ. ಶಿಲ್ಪಾ, ಡಾ. ರೂಪಾ ಕುಲ್ಕರ್ಣಿ, ಡಾ. ಮಂಜುಳಾ ಸೇರಿದಂತೆ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಸಮ್ಮ ಪ್ರಾರ್ಥಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಕುಪೇಂದ್ರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗಣ್ಣ ಕಿಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಡಾ. ಖಾಜಾವಲಿ ಈಚನಾಳ ಅವರು ಸಂಪನ್ಮೂಲ ವ್ಯಕ್ತಿ ರಮಜಾನಸಾಬ್ ಉಳ್ಳಾಗಡ್ಡಿ ಅವರನ್ನು ಪರಿಚಯಿಸಿದರು. ಕನ್ನಡ ಅಧ್ಯಾಪಕ ಭೀಮಣ್ಣ ಬೆಡಕಪಳ್ಳಿ ನಿರೂಪಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಖುತೇಜಾ ನಸ್ರಿನ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor