ಕಲಬುರಗಿ | ವಿಠ್ಠಲ ಹೇರೂರ ಮೂರ್ತಿ ಪ್ರತಿಷ್ಠಾಪನೆಗೆ ಸಹಮತ: ಅ.16ರ ಪ್ರತಿಭಟನೆ ಹಿಂಪಡೆತ
ಕಲಬುರಗಿ: ನಗರದ ಅಫಜಲಪುರ ರಸ್ತೆಯ ಹೈಕೋರ್ಟ್ ವೃತ್ತದ ಸಮೀಪ ದಿವಂಗತ ವಿಠ್ಠಲ ಹೇರೂರ ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತ ನಿರ್ಮಾಣಕ್ಕೆ ಕುರುಬ–ಗೊಂಡ ಸಮುದಾಯದ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ‘ನಮ್ಮ ನಡೆ–ಕಾರ್ಪೊರೇಷನ್ ಕಡೆ’ ಬೃಹತ್ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಸ್ವಾಭಿಮಾನಿ ವಿಠ್ಠಲ ಹೇರೂರ ಅಭಿಮಾನಿಗಳ ಸಂಘದ ಮುಖಂಡರು ತಿಳಿಸಿದ್ದಾರೆ.
ವಿಠ್ಠಲ ಹೇರೂರ ಅವರ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಎರಡೂ ಸಮುದಾಯಗಳ ನಡುವೆ ಉಂಟಾಗಿದ್ದ ಗೊಂದಲವನ್ನು ನಿವಾರಿಸಿ, ಪರಸ್ಪರ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 5ರಂದು ನಗರದ ಅಭಿಶ್ರೀ ಹೋಟೆಲ್‌ನಲ್ಲಿ ಕುರುಬ–ಗೊಂಡ ಹಾಗೂ ಕೋಲಿ ಸಮಾಜದ ಮುಖಂಡರ ಸಭೆ ನಡೆಸಲಾಯಿತು. ಸುದೀರ್ಘ ಚರ್ಚೆಯ ಬಳಿಕ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಮ್ಮತ ಮೂಡಿತು ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಸಭೆಯಲ್ಲಿ ನಗರದ ಹೈಕೋರ್ಟ್ ವೃತ್ತದ ಸಮೀಪ ವಿಠ್ಠಲ ಹೇರೂರ ಅವರ ಮೂರ್ತಿ ಪ್ರತಿಷ್ಠಾಪಿಸಿ ವೃತ್ತ ನಿರ್ಮಿಸಲು ಸಹಮತ ವ್ಯಕ್ತವಾಯಿತು. ಇದೇ ವೇಳೆ, ನಗರದ ಪ್ರತಿಷ್ಠಿತ ಸ್ಥಳವೊಂದರಲ್ಲಿ ಕುರುಬ ಸಮಾಜ ಗುರುತಿಸುವ ಜಾಗದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿ ಪ್ರತಿಷ್ಠಾಪಿಸಿ ವೃತ್ತ ನಿರ್ಮಿಸುವ ಕಾರ್ಯಕ್ಕೂ ಎರಡೂ ಸಮುದಾಯಗಳು ಪರಸ್ಪರ ಸಹಕಾರ ನೀಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಅಣ್ಯ ಮಾಕೇರಿ, ಲಕ್ಷ್ಮಣ ಜಮಾದಾರ್, ಶರಣಪ್ಪ ತಳವಾರ, ರಮೇಶ್ ನಾಟಿಕರ್, ಅಣ್ಯಗೌಡ ಪಾಟೀಲ್, ಬಸವರಾಜ ಬೂದಿಹಾಳ, ಶಾಂತಪ್ಪ ಕೂಡಿದ, ಬಸವರಾಜ ಹರವಾಳ, ಪಿಡ್ಡಪ್ಪ ಜಾಳಗರ್, ಸಂತೋಷ ತಳವಾರ, ರಾಮಲಿಂಗ ನಾಟಿಕರ್, ಗುರುನಾಥ ಹೇರೂರ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.