ಪಿಎಂಕೆಎಸ್‌ವೈ 2.0 ಯೋಜನೆಯಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಸುಭಾಷ್ ಆರ್.ಗುತ್ತೇದಾರ ಆಗ್ರಹ
ಕಲಬುರಗಿ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ 2.0) ಅಡಿಯಲ್ಲಿ ಆಳಂದ ತಾಲೂಕಿಗೆ ಮಂಜೂರಾದ 10 ಕೋಟಿ ಅನುದಾನದಲ್ಲಿ ಅವ್ಯವಹಾರ ನಡೆದಿದ್ದು, ಕಾಮಗಾರಿ ನಡೆಸದೆ ಸುಳ್ಳು ಬಿಲ್‌ಗಳನ್ನು ಸೃಷ್ಟಿಸಿ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ, ಪ್ರಕರಣವನ್ನು ಕೇಂದ್ರ ತನಿಖಾ ತಂಡದಿಂದ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024–25, 2025–26 ಮತ್ತು 2026–27ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಯಡಿ ಕಳಪೆ ಕಾಮಗಾರಿಗಳು ನಡೆದಿವೆ. ಸರ್ಕಾರದ ನಿಯಮಗಳನ್ನು ಪಾಲಿಸದ ಕಾರಣ ರೈತರಿಗೆ ಯೋಜನೆಯ ಪ್ರಯೋಜನ ದೊರೆತಿಲ್ಲ. ಆದರೆ, ಸರಕಾರದ ಹಣ ಮಾತ್ರ ಖರ್ಚಾಗಿದೆ ಎಂದು ಆರೋಪಿಸಿದರು.
2025–26ನೇ ಸಾಲಿನಲ್ಲಿ ತಡೋಳಾ, ಖಂಡಾಳ, ಜಮಗಾ (ಕೆ), ಖಜೂರಿ ಹಾಗೂ ಮಟಕಿ ಜಲಾನಯನ ಪ್ರದೇಶಗಳಲ್ಲಿ ಕಳಪೆ ಗುಣಮಟ್ಟದ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಸುಮಾರು 5 ಕೋಟಿ ದುರ್ಬಳಕೆ ಮಾಡಲಾಗಿದೆ ಎಂದು ದೂರಿದರು. ಮಟಕಿ ಗ್ರಾಮದಲ್ಲಿ ಚೆಕ್‌ಡ್ಯಾಂ ನಿರ್ಮಾಣದ ವೇಳೆ ಸಿಮೆಂಟ್, ಮರಳು ಹಾಗೂ ಇತರ ಸಾಮಗ್ರಿಗಳನ್ನು ಸಮರ್ಪಕ ಪ್ರಮಾಣದಲ್ಲಿ ಬಳಸಿಲ್ಲ. ಅಲ್ಲದೆ, ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ಜಮೀನಿನಲ್ಲಿಯೂ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿದರು.
2026–27ನೇ ಸಾಲಿನಲ್ಲಿ ಆಳಂದ ತಾಲೂಕಿಗೆ ಮಂಜೂರಾದ 150 ಸ್ಪ್ರಿಂಕ್ಲರ್ ಸೆಟ್‌ಗಳಿಗೆ ಒಂದೇ ದಿನ ಕಾರ್ಯಾದೇಶ ಪಡೆದು ಮಾರಾಟ ಮಾಡಲಾಗಿದೆ. ಅವುಗಳನ್ನು ಸ್ಥಳೀಯ ರೈತರಿಗೆ ವಿತರಿಸಿಲ್ಲ ಎಂದು ಗುತ್ತೇದಾರ ಆರೋಪಿಸಿದರು. ಇದೇ ಅವಧಿಯಲ್ಲಿ ಆಳಂದ ತಾಲೂಕಿನ ಬೀಜಗಳನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ವಾಹನವನ್ನು ಮಾದನಹಿಪ್ಪರಗಾ ಪೊಲೀಸರು ಜಪ್ತಿ ಮಾಡಿದ್ದರು ಎಂದರು.
ಯೋಜನೆಯ ಒಟ್ಟು 10 ಕೋಟಿ ಅನುದಾನದಲ್ಲಿ ನಿಯಮಾನುಸಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಜಮೀನುಗಳಲ್ಲಿ 2.50 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಅಂತಹ ರೈತರ ಜಮೀನುಗಳಲ್ಲಿ ಕಾಮಗಾರಿಗಳನ್ನು ನಡೆಸಿಲ್ಲ. ಇದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಆಳಂದ ತಾಲೂಕಿನ ರೈತರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಸಹಾಯಕ ಕೃಷಿ ನಿರ್ದೇಶಕರು ದೂರವಾಣಿ ಕರೆಗಳನ್ನು ಸ್ವೀಕರಿಸದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದ ಅವರು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಣ್ಣ ಮಂಗಾಣೆ, ಚಂದ್ರಕಾಂತ ಭೂಸನೂರ, ಮಲ್ಲಿಕಾರ್ಜುನ ಕಂದಗೂಳೆ, ಮಹಾದೇವಪ್ಪ ಪಾಟೀಲ, ಬಸವರಾಜ ನೆಲ್ಲೂರ, ನಾಗರಾಜ ಶೇಗಜಿ, ಆನಂದರಾವ ಪಾಟೀಲ, ರವಿ ಮದನಕರ, ರಮೇಶ ಬಿರಾದಾರ, ಸಂತೋಷ ಹಾದಿಮನಿ, ಲಿಂಗರಾಜ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.