Kalaburagi | ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅಣಬೆ ಕೃಷಿ ಕುರಿತು ರೈತರಿಗೆ ಮೂರು ದಿನಗಳ ತರಬೇತಿ

Update: 2026-08-12 17:29 IST

ಕಲಬುರಗಿ: 2026–27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕಲಬುರಗಿ ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ರೈತರಿಗೆ ಆಯೋಜಿಸಿದ್ದ ಮೂರು ದಿನಗಳ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.

ಸೇಡಂ ಉಪ ಕೃಷಿ ನಿರ್ದೇಶಕಿ–2 ಅನಸೂಯ ಹೂಗಾರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು. ಕಲಬುರಗಿ ಐಎಟಿ ಸಲಹೆಗಾರ ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಆರ್.ಸಿ. ಗುಂಡಪ್ಪಗೋಳ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಹಾಗೂ ಮುಖ್ಯಸ್ಥ ಅನಿಲಕುಮಾರ ರಾಠೋಡ ಉಪಸ್ಥಿತರಿದ್ದರು.

ಮೂರು ದಿನಗಳ ತರಬೇತಿಯಲ್ಲಿ ಅಣಬೆ ಕೃಷಿಯ ಪರಿಚಯ, ಮಹತ್ವ, ಬೇಸಾಯ ಪದ್ಧತಿ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಬೆಂಗಳೂರಿನ ಇಬ್ಬನಿ ಆರ್ಗಾನಿಕ್ ಮಶ್ರೂಮ್ಸ್‌ನ ರೋಶನಕುಮಾರ ಹಾಗೂ ಅರುಣಕುಮಾರ, ನವ ಭಾರತ ಫಾರಂನ ಅರವಿಂದ ಎಸ್. ಮೆಂತ್ರೆ, ಮೈರಾಡ್ ಆರ್ಗನೈಜೇಷನ್‌ನ ಹಿರಿಯ ವ್ಯವಸ್ಥಾಪಕ ತಾಜುದ್ಧೀನ್, ಕಮಲಾಪುರದ ಪ್ರಗತಿಪರ ರೈತ ಮಹಾದೇವ ಓಕಳಿ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೇಸರಕೊಪ್ಪದ ಮೈಕೋ ಮ್ಯಾಜಿಕ್ ಮಶ್ರೂಮ್ ಫಾರ್ಮ್‌ನ ರಾಕೇಶ್ ಬಿ. ಕಂಬಾರ, ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಭವಾನಿ, ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ ಸೇರಿದಂತೆ ಹಲವು ಅಣಬೆ ಬೆಳೆಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ನೀಡಿದರು.

ತರಬೇತಿಯಲ್ಲಿ ಭಾಗವಹಿಸಿದ್ದ ರೈತರು ಅಣಬೆ ಕೃಷಿಯ ತಾಂತ್ರಿಕ ವಿಧಾನಗಳು ಹಾಗೂ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡ ರೈತರು ಅಣಬೆ ಕೃಷಿಯನ್ನು ಪರ್ಯಾಯ ಆದಾಯದ ಮೂಲವಾಗಿ ಅಳವಡಿಸಿಕೊಳ್ಳುವ ಕುರಿತು ಆಸಕ್ತಿ ವ್ಯಕ್ತಪಡಿಸಿದರು.

ಸಹಾಯಕ ಕೃಷಿ ನಿರ್ದೇಶಕರು (ರೈ.ಮ) ನೀಲಕ್ಕಾ.ಎನ್ ನರಸಲಗಿ ಸ್ವಾಗತಿಸಿದರು. ಕೃಷಿ ಅಧಿಕಾರಿ ಪ್ರಿಯಾಂಕ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೃಷಿ ಅಧಿಕಾರಿ ಯಾಸ್ಮೀನ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News