Kalaburagi | ರ‍್ಯಾಗಿಂಗ್ ಶಿಕ್ಷಾರ್ಹ ಅಪರಾಧ: ಪ್ರೊ.ಅಶ್ಫಾಕ್ ಅಹ್ಮದ್
ಕಲಬುರಗಿ: ವಿದ್ಯಾರ್ಥಿ ಜೀವನವು ಬದುಕಿನ ಮಹತ್ವದ ಘಟ್ಟವಾಗಿದ್ದು, ಉತ್ತಮ ನಡತೆ ಹಾಗೂ ಭವಿಷ್ಯದ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಸಮಯವಾಗಿದೆ. ರ‍್ಯಾಗಿಂಗ್‌ಗೆ ಒಳಗಾದ ವಿದ್ಯಾರ್ಥಿಗಳು ಮಾನಸಿಕ ವೇದನೆ ಹಾಗೂ ಭಯಕ್ಕೆ ಒಳಗಾಗಿ ಭವಿಷ್ಯ ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ರ‍್ಯಾಗಿಂಗ್ ಮಾಡುವ ಹಿರಿಯ ವಿದ್ಯಾರ್ಥಿಗಳ ಭವಿಷ್ಯವೂ ಹಾಳಾಗಬಹುದು ಎಂದು ಕೆಬಿಎನ್ ವಿಶ್ವವಿದ್ಯಾಲಯದ ಸಮ-ಉಪಕುಲಪತಿ ಪ್ರೊ.ಅಶ್ಫಾಕ್ ಅಹ್ಮದ್ ಹೇಳಿದರು.
ನಗರದ ಕೆಬಿಎನ್ ವಿಶ್ವವಿದ್ಯಾಲಯದ ಅನಾಟಮಿ ಹಾಲ್‌ನಲ್ಲಿ ಬುಧವಾರ ನಡೆದ ಆ್ಯಂಟಿ ರ‍್ಯಾಗಿಂಗ್ ವೀಕ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರ‍್ಯಾಗಿಂಗ್ ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥ ವಿದ್ಯಾರ್ಥಿಗಳ ಪ್ರವೇಶ ರದ್ದುಪಡಿಸುವಂತಹ ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಸಿದರು.
ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮಿರ್ ವಿಲಾಯತ್ ಮಾತನಾಡಿ, ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ರ‍್ಯಾಗಿಂಗ್‌ಗೆ ಯಾವುದೇ ಅವಕಾಶವಿಲ್ಲ. ತಮಾಷೆಯ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುವುದು ಅಥವಾ ಅವಮಾನಿಸುವುದು ಸರಿಯಲ್ಲ. ರ‍್ಯಾಗಿಂಗ್‌ನಂತಹ ಘಟನೆಗಳು ಕಂಡುಬಂದರೆ ತಕ್ಷಣ ಆ್ಯಂಟಿ ರ‍್ಯಾಗಿಂಗ್ ಸಮಿತಿ ಅಥವಾ ವಿಶ್ವವಿದ್ಯಾಲಯದ ಆಡಳಿತದ ಗಮನಕ್ಕೆ ತರಬೇಕು. ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿದ್ಯಾರ್ಥಿ ಕಲ್ಯಾಣ ಕೌನ್ಸಲರ್ ಅಶ್ವತಿ ಅವರು ರ‍್ಯಾಗಿಂಗ್‌ನ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆ್ಯಂಟಿ ರ‍್ಯಾಗಿಂಗ್ ಜಾಗೃತಿ ಮೂಡಿಸುವ ವಿಡಿಯೊ ಪ್ರದರ್ಶಿಸಲಾಯಿತು.
ಕಾನೂನು ನಿಕಾಯದ ಮಹಾಲಕ್ಷ್ಮಿ ಅವರು ರ‍್ಯಾಗಿಂಗ್‌ಗೆ ಸಂಬಂಧಿಸಿದ ಕಾನೂನುಗಳು ಹಾಗೂ ಶಿಕ್ಷೆಗಳ ಕುರಿತು ಉಪನ್ಯಾಸ ನೀಡಿದರು.
ಸಹಾಯಕ ಪ್ರಾಧ್ಯಾಪಕಿ ಡಾ. ಸನಾ ಇಜಾಜ ನಿರೂಪಿಸಿದರು. ಡಾ. ಮಾರುಫ್ ಸ್ವಾಗತಿಸಿದರು. ಡಾ. ಗೀತಾಂಜಲಿ ಕಾರ್ಯಕ್ರಮದ ವಿವರ ನೀಡಿದರು. ಡಾ. ಜಿಬ್ರಾನ್ ಅನ್ವರ್ ವಂದಿಸಿದರು.
ಐಕ್ಯೂಎಸಿ ನಿರ್ದೇಶಕ ಡಾ. ಅಬ್ದುಲ್ ಬಶೀರ್, ಡೀನರಾದ ಡಾ. ಗುರುಪ್ರಸಾದ್, ಡಾ. ಅನೂಪ್ ದೇಸಾಯಿ, ಡಾ. ಶ್ರೀನಿವಾಸ್, ಡಾ. ಸುಭಾಸ್ ಕಮಲ, ಡಾ. ಇಕ್ಬಾಲ್ ಮಟ್ಟು, ಡಾ. ಸಿದ್ದೇಶ್ ಸಿರವಾರ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿದ್ಧಲಿಂಗ ಚೆಂಗಟಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.