Kalaburagi | ಜಿಲ್ಲಾಧಿಕಾರಿಗಳ ಭರವಸೆ: ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ವಿರುದ್ಧದ ಧರಣಿ ಹಿಂಪಡೆದ ಹೋರಾಟಗಾರರು
ಕಲಬುರಗಿ: ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಅಕ್ರಮಗಳ ಕುರಿತು ಸುಳ್ಳು ವರದಿ ನೀಡಲಾಗಿದೆ ಎಂದು ಆರೋಪಿಸಿ, ಕಾರ್ಮಿಕರು ಮತ್ತು ರೈತರ ಪರ ಹೋರಾಟಗಾರ ಅಶೋಕ ಕುಮಾರ್ ಶೀಲವಂತ್ ನೇತೃತ್ವದಲ್ಲಿ ನಡೆಸಲಾಗುತ್ತಿದ್ದ ಧರಣಿ ಸತ್ಯಾಗ್ರಹವನ್ನು ಜಿಲ್ಲಾಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳಖೇಡದಿಂದ ಅ. 28ರಂದು ಆರಂಭವಾಗಿದ್ದ ಪಾದಯಾತ್ರೆ ಅ. 31ರಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹೋರಾಟಗಾರರು, ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕಂಪನಿಯ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.
ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ, ಪ್ರಕರಣದ ಕುರಿತು ತನಿಖಾ ತಂಡ ರಚಿಸುವುದಾಗಿ ತಿಳಿಸಿದರು. 2010ರಲ್ಲಿ ಉಡಗಿ ಮತ್ತು ಹಂಗನಹಳ್ಳಿ ಗ್ರಾಮಗಳಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಮನೆಗೊಂದು ಉದ್ಯೋಗ ಕೊಡಿಸುವ ಭರವಸೆಯನ್ನೂ ನೀಡಿದರು. ಈ ಭರವಸೆಗಳ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ ಎಂದು ಅಶೋಕ ಕುಮಾರ್ ಶೀಲವಂತ್ ತಿಳಿಸಿದ್ದಾರೆ.
ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ 120 ಎಕರೆ ಗೋಮಾಳ ಜಮೀನಿನ ಕುರಿತು ಹಿಂದಿನ ಅಧಿಕಾರಿಗಳು ಸರ್ಕಾರಿ ಜಮೀನು ಎಂದು ವರದಿ ನೀಡಿದ್ದರೆ, ನಂತರದ ವರದಿಯಲ್ಲಿ ಖಾಸಗಿ ಜಮೀನು ಎಂದು ಉಲ್ಲೇಖಿಸಲಾಗಿದೆ. ಈ ವರದಿಗಳಲ್ಲಿನ ವ್ಯತ್ಯಾಸದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಸಿಮೆಂಟ್ ಕಾರ್ಖಾನೆಗಳು, ಸಕ್ಕರೆ ಕಾರ್ಖಾನೆಗಳು ಹಾಗೂ ಸೋಲಾರ್ ಕಂಪನಿಗಳ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ತನಿಖೆ ನಡೆಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.