ಕಲಬುರಗಿ : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ, ನಕಲಿ ಷೇರು ಮಾರುಕಟ್ಟೆ ಆ್ಯಪ್ ಹಾಗೂ ಐಪಿಒ ಷೇರು ಹಂಚಿಕೆಯ ಹೆಸರಿನಲ್ಲಿ ಉದ್ಯಮಿಯೊಬ್ಬರಿಗೆ 13.55 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಕಾವೇರಿ ನಗರದ ನಿವಾಸಿ ರಾಕೇಶ್ (42) ವಂಚನೆಗೊಳಗಾದವರು. ಈ ಕುರಿತು ಅವರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರರು ಎಂಬಿಎ ಪದವೀಧರರಾಗಿದ್ದು, ಬೆಂಗಳೂರಿನ ಇಂಡಿಯಾ ಇನ್ಫೋಲೈನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 15 ವರ್ಷಗಳಿಂದ ಷೇರು ಮಾರುಕಟ್ಟೆಯ ಬಗ್ಗೆ ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. 2025ರ ಜುಲೈ 6ರಂದು ಅಪರಿಚಿತ ವಾಟ್ಸ್‌ಆ್ಯಪ್ ಸಂಖ್ಯೆಯಿಂದ ಕರೆ ಮಾಡಿದ ಮಹಿಳೆಯೊಬ್ಬರು, ತಾನು ಮುಂಬೈನ ಸ್ನೇಹಾ ಸದಾ ಎಂದು ಪರಿಚಯಿಸಿಕೊಂಡು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇಂಡಿಯಾ ಇನ್ಫೋಲೈನ್ ಕಂಪನಿಯ ಪ್ರೀಮಿಯಂ ಗ್ರಾಹಕರಿಗೆ ಗ್ರೇ ಮಾರ್ಕೆಟ್ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಲು ಅವಕಾಶವಿದ್ದು, ಹೆಚ್ಚಿನ ಲಾಭಾಂಶ ದೊರೆಯಲಿದೆ ಎಂದು ಮಹಿಳೆ ನಂಬಿಸಿದ್ದಾಳೆ. ಬಳಿಕ ನಕಲಿ ವೆಬ್‌ಸೈಟ್ ಲಿಂಕ್ ಕಳುಹಿಸಿ, ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ನೀಡಿದ್ದಾಳೆ. ಅದರ ಮೂಲಕ ಲಾಗಿನ್ ಆದಾಗ ನೈಜ ಷೇರು ಮಾರುಕಟ್ಟೆ ಆ್ಯಪ್‌ನಂತೆ ಕಾಣುವ ಡ್ಯಾಶ್‌ಬೋರ್ಡ್‌ನಲ್ಲಿ ಹೂಡಿಕೆ ಹಾಗೂ ಲಾಭದ ವಿವರಗಳು ಪ್ರದರ್ಶನವಾಗುತ್ತಿದ್ದವು.

ಇದನ್ನು ನಂಬಿದ ರಾಕೇಶ್, ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ ಶೇ.10ರಷ್ಟು ಲಾಭ ದೊರೆಯುತ್ತಿರುವಂತೆ ನಕಲಿ ಡ್ಯಾಶ್‌ಬೋರ್ಡ್‌ನಲ್ಲಿ ತೋರಿಸಲಾಗುತ್ತಿತ್ತು. ಆದರೆ, ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಬ್ಯಾಂಕ್ ಖಾತೆ ಮತ್ತು ಐಎಫ್‌ಎಸ್‌ಸಿ ವಿವರಗಳು ತಪ್ಪಾಗಿವೆ ಎಂದು ಹೇಳಿ ಹಣ ಬಿಡುಗಡೆ ಮಾಡಿರಲಿಲ್ಲ.

ನಂತರ ಅವರ ಹೆಸರಿನಲ್ಲಿ ಐಪಿಒ ಷೇರುಗಳು ಹಂಚಿಕೆಯಾಗಿವೆ ಎಂದು ನಂಬಿಸಿದ ಆರೋಪಿಗಳು, ಷೇರುಗಳನ್ನು ಪಡೆಯಲು ಬಾಕಿ ಮೊತ್ತ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ. ಮೊದಲಿಗೆ 106 ಲಾಟ್‌ಗಳಲ್ಲಿ ತಲಾ 100 ಷೇರುಗಳಂತೆ ಹಂಚಿಕೆಯಾಗಿರುವುದಾಗಿ ತಿಳಿಸಿ, ಮತ್ತೆ 2 ಲಕ್ಷ ರೂ. ಪಾವತಿಸುವಂತೆ ಹೇಳಿದ್ದಾರೆ. ಬಳಿಕ 16 ಲಕ್ಷ ರೂ. ಹಾಗೂ 32 ಲಕ್ಷ ರೂ. ಮೌಲ್ಯದ ಐಪಿಒ ಷೇರುಗಳು ಹಂಚಿಕೆಯಾಗಿರುವುದಾಗಿ ತೋರಿಸಿ, ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಇದನ್ನು ನಂಬಿದ ರಾಕೇಶ್ ಮತ್ತಷ್ಟು 6 ಲಕ್ಷ ರೂ. ಪಾವತಿಸಿದ್ದಾರೆ.

ಹೀಗೆ ಹೂಡಿಕೆ ಮತ್ತು ಲಾಭಾಂಶ ಸೇರಿ ತಮ್ಮ ಖಾತೆಯಲ್ಲಿ ಸುಮಾರು 1 ಕೋಟಿ ರೂ. ಇರುವುದಾಗಿ ನಕಲಿ ಆ್ಯಪ್‌ನಲ್ಲಿ ತೋರಿಸಲಾಗಿತ್ತು. ಈ ಹಣವನ್ನು ಹಿಂಪಡೆಯಲು ಕೇಳಿದಾಗ, ದೊಡ್ಡ ಮೊತ್ತವಾಗಿರುವುದರಿಂದ ತಮ್ಮ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆಯಬೇಕೆಂದು ಆರೋಪಿಗಳು ತಿಳಿಸಿದ್ದಾರೆ. ಈ ಹಿಂದೆ ಹೊಂದಿದ್ದ ಚಾಲ್ತಿ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಸಮಯ ಬೇಕಾಗಿದ್ದರಿಂದ ಅನುಮಾನಗೊಂಡ ರಾಕೇಶ್, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಚರ್ಚಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.

ಕೂಡಲೇ 1930 ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದರೂ ಹಣ ವಾಪಸ್ ಬಂದಿಲ್ಲ. ಹೀಗಾಗಿ ಸಿಇಎನ್ ಪೊಲೀಸ್ ಠಾಣೆಗೆ ನೇರವಾಗಿ ತೆರಳಿ ದೂರು ನೀಡಿದ್ದಾರೆ. ಎಸ್‌ಬಿಐ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಖಾತೆಗಳಿಂದ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 13.55 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 67/2026ರ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಸಿ), 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 318(2), 318(4), 319(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ