ಕಲಬುರಗಿ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವಜನತೆಗೆ ಸಂಸದೀಯ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ‘ಯುವ ಸಂಸತ್ತು’ ಆಯೋಜಿಸಿ, ಇದೇ ವಾರದಲ್ಲಿ ತಾಲೂಕು ಮಟ್ಟದ ಸಭೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮ್ ಶರೀಫ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಯುವ ಸಂಸತ್ತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯ ಮಾದರಿಯಲ್ಲಿ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಸಾಧ್ಯವಾದರೆ 224 ವಿದ್ಯಾರ್ಥಿಗಳನ್ನೊಳಗೊಂಡ ಯುವ ಸಂಸತ್ತು ರಚಿಸಬೇಕು ಎಂದು ತಿಳಿಸಿದರು.

ತಾಲೂಕು ಮಟ್ಟದ ಯುವ ಸಂಸತ್ತಿನಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಯುವ ಸಂಸತ್ತಿಗೆ ಶಿಫಾರಸು ಮಾಡಲಾಗುವುದು. ನಂತರ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಬ್ಬರನ್ನು ರಾಜ್ಯ ಮಟ್ಟದ ಯುವ ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎಂದರು.

ಯುವ ಸಂಸತ್ತು ಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸುವ ಜವಾಬ್ದಾರಿಯನ್ನು ಬಿಇಒಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ವಹಿಸಬೇಕು. ಜಿಲ್ಲಾ ಮಟ್ಟದ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ವಕೀಲರ ಸಂಘದ ಜಿಲ್ಲಾಧ್ಯಕ್ಷರನ್ನು ಆಹ್ವಾನಿಸಬೇಕು. ತಾಲೂಕು ಮಟ್ಟದ ಸಭೆಗೆ ಸ್ಥಳೀಯ ಶಾಸಕರು, ಸಂಸದರು ಹಾಗೂ ನ್ಯಾಯಾಧೀಶರನ್ನು ಆಹ್ವಾನಿಸುವಂತೆ ಸೂಚಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ವಿಧಾನಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯ ಸಚೇತಕರ ಪಾತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆ, ಗೊತ್ತುವಳಿ ಹಾಗೂ ವಿಧೇಯಕ ಮಂಡನೆ ಸೇರಿದಂತೆ ವಿಧಾನಸಭೆಯ ಕಾರ್ಯವಿಧಾನಗಳನ್ನು ಅನುಸರಿಸಿ ಯುವ ಸಂಸತ್ತು ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಮನಿ ಯುವ ಸಂಸತ್ತಿನ ರಚನೆ ಮತ್ತು ಕಾರ್ಯವಿಧಾನದ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಡಿಡಿಪಿಐ ಶಂಕ್ರೆಮ್ಮ ಡವಳಗಿ ಸೇರಿದಂತೆ ತಹಶೀಲ್ದಾರರು, ಬಿಇಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor