×
Ad

Kalaburagi | ಆರೆಸ್ಸೆಸ್‌ ನಿಷೇಧಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧದ ಹೇಳಿಕೆಗೆ ಖಂಡನೆ : ಕ್ರಮಕ್ಕೆ ಒತ್ತಾಯ

Update: 2026-06-25 21:03 IST

ಕಲಬುರಗಿ : ಆರೆಸ್ಸೆಸ್‌ ಸಂಘಟನೆಯ ನೋಂದಣಿ ಹಾಗೂ ಅದರ ಚಟುವಟಿಕೆಗಳ ಕುರಿತು ರಾಜ್ಯ ಸರ್ಕಾರ ಸ್ಪಷ್ಟತೆ ಪಡೆಯಬೇಕು ಮತ್ತು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಆರೆಸ್ಸೆಸ್‌ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್‌ ಸಂಘಟನೆಯ ನೋಂದಣಿ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದ ಬಳಿಕ ಕೆಲವು ಬಿಜೆಪಿ ನಾಯಕರು ಅವರ ವಿರುದ್ಧ ವೈಯಕ್ತಿಕ ಟೀಕೆ ಮತ್ತು ಬೆದರಿಕೆ ಸ್ವರೂಪದ ಹೇಳಿಕೆಗಳನ್ನು ನೀಡಿದ್ದಾರೆ. ಈ ಕುರಿತು ಸಂಬಂಧಪಟ್ಟವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ದೇಶದ ವಿವಿಧ ಸಂಘಟನೆಗಳು ಕಾನೂನುಬದ್ಧವಾಗಿ ನೋಂದಣಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆರೆಸ್ಸೆಸ್‌ ಸಂಘಟನೆಯ ನೋಂದಣಿ ಕುರಿತು ಸ್ಪಷ್ಟ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಪಾರದರ್ಶಕತೆ ತೋರಿಸದಿದ್ದರೆ ಆರೆಸ್ಸೆಸ್‌ ಅನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಮಲ್ಲಪ್ಪ ಹೊಸಮನಿ ಮಾತನಾಡಿ, ಆರೆಸ್ಸೆಸ್‌ ಸಂಘಟನೆಯ ಹಣಕಾಸು ಮೂಲಗಳು ಮತ್ತು ಅದರ ಚಟುವಟಿಕೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಕಾರ್ಯವೈಖರಿ ಕುರಿತು ಸರ್ಕಾರ ಸ್ಪಷ್ಟತೆ ನೀಡಬೇಕೆಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಮಲ್ಲಪ್ಪ ಹೊಸಮನಿ, ಅಶೋಕ ವೀರನಾಯಕ, ದೇವೀಂದ್ರಪ್ಪ ಸಿನ್ನೂರು, ರಾಜೀವ್ ಜಾನೆ, ದಿನೇಶ್ ದೊಡ್ಡಮನಿ, ಸಿದ್ದಾರ್ಥ ಕೋರವಾರ, ರಾಮು ರಾಠೋಡ್, ಸುನೀಲ ಮಾನಪಡೆ, ಅಶ್ವಿನ್ ಸಂಕಾ, ರೇಣುಕಾ ಸಿಂಗೆ, ಶಿವಾನಂದ ಹೋನಗುಂಟಾ, ರಮೇಶ ಚಿಮ್ಮದಯಲಿ, ಮಂಜುನಾಥ ಸಿಕೆ, ರಾಜು ಕೊರಹಳ್ಳಿ, ರಾಮು ರಾಠೋಡ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಸಾರ್ವಜನಿಕ ಜೀವನದಲ್ಲಿರುವವರು ಎತ್ತುವ ಪ್ರಶ್ನೆಗಳಿಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ಉತ್ತರ ನೀಡಬೇಕು. ವೈಯಕ್ತಿಕ ನಿಂದನೆ ಅಥವಾ ಬೆದರಿಕೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಸಚಿವ ಖರ್ಗೆ ವಿರುದ್ಧ ಮಾಡುತ್ತಿರುವ ನಿಂದನೆ ಖಂಡನೀಯ.

-ದಿನೇಶ್ ದೊಡ್ಡಮನಿ, ದಲಿತ ಮುಖಂಡ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News