ಯಡ್ರಾಮಿ : ಟಿಪ್ಪು ಸುಲ್ತಾನ್ ಜಯಂತಿಯ ಬಹಿರಂಗ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿರುವುದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಟಿಪ್ಪು ಕ್ರಾಂತಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ದಸ್ತಗಿರಸಾಬ್ ಮುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಹಝರತ್ ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ ಸಮಿತಿಯ ವತಿಯಿಂದ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಅವರ 276ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಟಿಪ್ಪು ಸುಲ್ತಾನ್ ಅವರ ಇತಿಹಾಸ ಮತ್ತು ದೇಶಪ್ರೇಮವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಜಯಂತಿ ಆಚರಣೆಗೆ ಮುಂದಾಗಿದ್ದರೂ, ಬಹಿರಂಗ ಕಾರ್ಯಕ್ರಮಕ್ಕೆ ಅನುಮತಿ ನೀಡದಿರುವುದು ಖಂಡನೀಯ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಮಟ್ಟದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಲಾಗಿತ್ತು. ಆದರೆ, ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದ್ದರೂ ಖಾಸಗಿ ಸಂಘಟನೆಯಿಂದ ಆಯೋಜಿಸುವ ಕಾರ್ಯಕ್ರಮಕ್ಕೂ ಅನುಮತಿ ನಿರಾಕರಿಸಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಮತಗಳಿಂದ ಗೆಲುವು ಸಾಧಿಸಿರುವ ಜೇವರ್ಗಿ ಕ್ಷೇತ್ರದ ಶಾಸಕರು ಅದ್ಧೂರಿಯಾಗಿ ಜಯಂತಿ ಆಚರಿಸಲು ಸಹಕಾರ ನೀಡುವ ಬದಲು ಸಂಕ್ಷಿಪ್ತವಾಗಿ ಕಾರ್ಯಕ್ರಮ ನಡೆಸುವಂತೆ ಮಾಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಬೇಕಾಗುತ್ತದೆ. ಪ್ರತಿಯೊಂದು ಸಮಾಜದಲ್ಲಿಯೂ ಒಳ್ಳೆಯವರ ಜತೆಗೆ ಕೆಟ್ಟವರೂ ಇರುತ್ತಾರೆ. ಅಂತಹವರ ಬಗ್ಗೆ ಸಮಾಜದ ಜನರು ಎಚ್ಚರಿಕೆಯಿಂದ ಇರಬೇಕು. ಚುನಾವಣೆ ಸಂದರ್ಭದಲ್ಲಿ ಮತದಾನದ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.

ಯುವಕರಿಂದ ಪ್ರತಿಭಟನಾ ಮೆರವಣಿಗೆ :

ಟಿಪ್ಪು ಜಯಂತಿಯ ಬಹಿರಂಗ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವುದನ್ನು ಹಾಗೂ ಸ್ಥಳೀಯರಾಗಿದ್ದರೂ ಸಚಿವರು ಕಾರ್ಯಕ್ರಮಕ್ಕೆ ಆಗಮಿಸದಿರುವುದನ್ನು ಖಂಡಿಸಿ ನೂರಾರು ಯುವಕರು ಪಟ್ಟಣದ ಸರ್ದಾರ್ ಶರಣಗೌಡ ವೃತ್ತದಿಂದ ಕಲ್ಯಾಣಿ ಕಲ್ಯಾಣ ಮಂಟಪದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಬ್ಯಾನರ್‌ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರಕಿಹಳ್ಳಿಯ ಶ್ರೀ ಶಿವಕುಮಾರ ಸ್ವಾಮೀಜಿ, ಟಿಪ್ಪು ಸುಲ್ತಾನ್ ಜಯಂತಿ ಸಮಿತಿ ತಾಲೂಕು ಅಧ್ಯಕ್ಷ ರಹೀಮ್ ಪಾಷಾ ಹೊಸಮನಿ, ಜೇವರ್ಗಿ ತಾಲೂಕು ಅಧ್ಯಕ್ಷ ಮೋಹಿನುದ್ದಿನ್ ಇನಾಮದಾರ, ಭಗವಂತರಾಯ ಬೆಣ್ಣೂರ, ಅಮೀರ್ ಪಟೇಲ್ ಚಿಂಚೋಳಿ, ರಾಜುಗೌಡ ಮಾಲಿಪಾಟೀಲ್, ಮಹಾಂತಪ್ಪ ದೊರೆ, ಹಬೀಬ್ ಕೊಂಡಗೂಳಿ, ಅಲಿಸಾಬ್ ಹಚ್ಚಡದ, ಈರಣ್ಣ ಭಜಂತ್ರಿ, ಶಫಿಉಲ್ಲಾ ದಖನಿ, ಸುಭಾನ್ ಪಟೇಲ್ ಸೈದಾಪುರ, ಅಪ್ರೋಜ್ ಅತ್ತೂರ, ಆಸೀಫ್ ಡಲಾಯತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ