ಸೇಡಂ: ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ. ಹೀಗಾಗಿ ವಾಲ್ಮೀಕಿ ಸಮುದಾಯದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.

ನಗರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳಿಗೆ ಅಧಿಕಾರದಲ್ಲಿ ಇರಲು ಐದು ವರ್ಷಗಳ ಅವಧಿ ಇರುತ್ತದೆ. ಚುನಾವಣೆಯಲ್ಲಿ ಗೆದ್ದರೆ ಮತ್ತೊಮ್ಮೆ ಅಧಿಕಾರ ಪಡೆಯಬಹುದು. ಆದರೆ ಶಿಕ್ಷಣದ ಮೂಲಕ ದೊರೆಯುವ ಉದ್ಯೋಗವು ಸುಮಾರು 60 ವರ್ಷಗಳವರೆಗೆ ಬದುಕಿಗೆ ಭದ್ರತೆ ನೀಡುತ್ತದೆ. ಈ ವ್ಯತ್ಯಾಸವನ್ನು ಸಮಾಜದ ಪ್ರತಿಯೊಬ್ಬರೂ ಅರಿತುಕೊಂಡು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಬೇಡರ ಕಣ್ಣಪ್ಪ ಅವರು ಶಿವನ ಪರಮಭಕ್ತರಾಗಿದ್ದು, ಭಕ್ತಿಯ ಪರಾಕಾಷ್ಠೆಯಲ್ಲಿ ತಮ್ಮ ಕಣ್ಣನ್ನೇ ಶಿವನಿಗೆ ಅರ್ಪಿಸಿದ ಮಹಾನ್ ಭಕ್ತರು. ಅವರ ಭಕ್ತಿಯ ಹಿನ್ನೆಲೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಕೆಲವರು ಅಪಾರ್ಥ ಕಲ್ಪಿಸುತ್ತಾರೆ. ಇಂತಹ ವಿಚಾರಗಳನ್ನು ಐತಿಹಾಸಿಕ ಹಾಗೂ ಭಕ್ತಿಯ ಹಿನ್ನೆಲೆಯೊಂದಿಗೆ ಅರ್ಥೈಸಿಕೊಳ್ಳಬೇಕು ಎಂದರು.

ಪಕ್ಷಾತೀತ ಹೋರಾಟಕ್ಕೆ ಕರೆ :

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿಯನ್ನು ಹೆಚ್ಚಿಸಲಾಗಿತ್ತು. ಆದರೆ ಇದೀಗ ಅದಕ್ಕೆ ಹಿನ್ನಡೆಯಾಗಿದೆ. ಕಾಂಗ್ರೆಸ್, ಬಿಜೆಪಿ, ಜನತಾದಳ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಒಂದಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು. ಎಸ್‌ಟಿ ಮೀಸಲಾತಿಯನ್ನು ಶೇ.7ಕ್ಕೆ ಮರುಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ರಾಜುಗೌಡ ಕರೆ ನೀಡಿದರು.

ಕಾಂಗ್ರೆಸ್, ಬಿಜೆಪಿ ಎಂದು ನಮ್ಮೊಳಗೆ ಜಗಳವಾಡಿಕೊಂಡರೆ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಗಂಡ-ಹೆಂಡತಿಯ ಜಗಳದಲ್ಲಿ ಮಕ್ಕಳಿಗೆ ತೊಂದರೆಯಾಗುವಂತೆ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಸಮಾಜಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ವೈಯಕ್ತಿಕ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮುದಾಯದ ಹಿತಕ್ಕಾಗಿ ಒಂದಾಗಬೇಕು ಎಂದು ಹೇಳಿದರು.

ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಜಂಟಿ ಪ್ರಯತ್ನ :

ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಪ್ರಯತ್ನ ನಡೆಸಿದ್ದೆ. ಆದರೆ ಚುನಾವಣೆಯಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಆ ಕಾರ್ಯ ನೆನೆಗುದಿಗೆ ಬಿದ್ದಿದೆ. ಈಗಿನ ಶಾಸಕರು ಪುತ್ಥಳಿ ಸ್ಥಾಪನೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಗೆದ್ದು ತಾವೇ ಪುತ್ಥಳಿ ಸ್ಥಾಪನೆ ಮಾಡಿಸುವುದಾಗಿ ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ರಾಜುಗೌಡ, ಗೆಲುವು-ಸೋಲು ಮುಖ್ಯವಲ್ಲ. ವಾಲ್ಮೀಕಿ ಸಮುದಾಯದ ಗೌರವದ ಸಂಕೇತವಾಗಿರುವ ಪುತ್ಥಳಿ ಸ್ಥಾಪನೆಗೆ ಇಬ್ಬರೂ ಸೇರಿ ಪ್ರಯತ್ನಿಸೋಣ ಎಂದು ಹೇಳಿದರು. ಇದಕ್ಕೆ ರಾಜಕುಮಾರ ಪಾಟೀಲ ತೆಲ್ಕೂರ ಸಹಮತ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಂಚಾಕ್ಷರಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಕಾಂತ ನಾಯಿಕೋಡಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಕೃಷಿಕ ಸಮಾಜದ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ, ಸಿಪಿಐ ಮಹಾದೇವಪ್ಪ ದಿಡ್ಡಿಮನಿ, ಪಿಎಸ್‌ಐ ಶರಣಪ್ಪ ಜಾಕನಳ್ಳಿ ಮಳಖೇಡ, ಮಲ್ಲಿಕಾರ್ಜುನ ಮೆಕಾನಿಕ್, ಸತೀಷ ಪೂಜಾರಿ, ಜ್ಯೋತಿ ಮಾರ್ಲಾ, ಗೀತಾ ಸಂತೋಷ, ಡಾ. ರೇಖಾ ಮೊಕದಮ್, ಯಲ್ಲಾಲಿಂಗ ದೊರೆ, ರಮೇಶ ಎಂ.ಬಿ. ಉಡಮನಳ್ಳಿ, ಸುಭಾಷ ಮಾಸ್ಟರ್, ಮಾರುತಿ ಜಾಕನಹಳ್ಳಿ, ಭೀಮರಾಯ ನಾಯಕ, ಭಾಗೇಶ ದೊರೆ, ರೇವಣಸಿದ್ದ ಸಿಂಧೆ, ಶಂಭುಲಿಂಗ ನಾಟೀಕಾರ್, ಸುನಿಲ್ ಸಟಪಟನಹಳ್ಳಿ, ಯುವ ಘಟಕದ ಅಧ್ಯಕ್ಷ ದಿನೇಶ ಗೌಡ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿಕ್ಷಕಿ ಜಗದೀಶ್ವರಿ ಯರಗೋಳ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಶ್ರೀ ಕೊತ್ತಲಬಸವೇಶ್ವರ ದೇವಸ್ಥಾನದಿಂದ ಸುವರ್ಣ ಕರ್ನಾಟಕ ಭವನದವರೆಗೆ ಭವ್ಯ ಮೆರವಣಿಗೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ