Kalaburagi | ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಆಗ್ರಹ
ಹೊರಗುತ್ತಿಗೆ ಪದ್ಧತಿ ರದ್ದು, ನೇರ ನೇಮಕಾತಿಗೆ ಸಚಿವ ಯತೀಂದ್ರ ಸಿದ್ಧರಾಮಯ್ಯರಿಗೆ ಮನವಿ
ಕಲಬುರಗಿ: ರಾಜ್ಯದಾದ್ಯಂತ ಹೊರಗುತ್ತಿಗೆ ಹಾಗೂ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಎಲ್ಲ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮತ್ತು ನೇರ ವೇತನ ಪಾವತಿ ವ್ಯವಸ್ಥೆಗೆ ಒಳಪಡಿಸಿ ಖಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಕಲಬುರಗಿ ಜಿಲ್ಲಾ ಸಮಿತಿ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ನಗರಕ್ಕೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ಸಂಘದ ನಿಯೋಗ, ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಡ್ರೈವರ್, ಕ್ಲೀನರ್, ಲೋಡರ್, ಯುಜಿಡಿ ಸಿಬ್ಬಂದಿ ಸೇರಿದಂತೆ ಹೊರಗುತ್ತಿಗೆ ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರನ್ನು ತಕ್ಷಣ ನೇರ ವೇತನ ಪಾವತಿ ವ್ಯವಸ್ಥೆಗೆ ಒಳಪಡಿಸಿ, ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿತು.
ಎಲ್ಲ ಪೌರ ಕಾರ್ಮಿಕರಿಗೆ ಬಾಕಿ ಇರುವ ಕನಿಷ್ಠ ವೇತನವನ್ನು ಪಾವತಿಸಬೇಕು. “ಸಮಾನ ಕೆಲಸಕ್ಕೆ ಸಮಾನ ವೇತನ” ತತ್ವವನ್ನು ಜಾರಿಗೊಳಿಸಬೇಕು. ತುಟ್ಟಿ ಭತ್ಯೆಯನ್ನು ಸೂಚ್ಯಂಕ 19,328ಕ್ಕೆ ಅನುಗುಣವಾಗಿ 1,024 ರೂ. ರ ಮೂಲ ವೇತನಕ್ಕೆ ವಿಲೀನಗೊಳಿಸುವಂತೆ ಸಂಘ ಆಗ್ರಹಿಸಿತು.
ಕಾರ್ಮಿಕರಿಗೆ ಸುರಕ್ಷತಾ ಉಪಕರಣಗಳು, ಸ್ವಚ್ಛತಾ ಸಾಮಗ್ರಿಗಳು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಸ್ಥಳೀಯ ಸಂಸ್ಥೆಗಳೇ ಒದಗಿಸಬೇಕು ಅಥವಾ ಅದರ ವೆಚ್ಚವನ್ನು ಭರಿಸಬೇಕು. ನಿವೃತ್ತ ಪೌರ ಕಾರ್ಮಿಕರಿಗೆ 10 ಲಕ್ಷ ರೂ. ಪರಿಹಾರ, ಅವರ ಅವಲಂಬಿತರಿಗೆ ಉದ್ಯೋಗ, ಗೃಹಭಾಗ್ಯ ಯೋಜನೆಯ ವಿಸ್ತರಣೆ, ದೂರು ಪರಿಹಾರ ಸಮಿತಿ ರಚನೆ ಹಾಗೂ ಪೌಷ್ಟಿಕ ಆಹಾರ ವಿತರಣೆಯಂತಹ ಬೇಡಿಕೆಗಳನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕಲಬುರಗಿ ನಗರದ ವಿಸ್ತರಣೆ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಛತಾ ಸೇವೆ ಸುಧಾರಣೆಗೆ ಹೆಚ್ಚುವರಿಯಾಗಿ 1,000 ಪೌರ ಕಾರ್ಮಿಕರನ್ನು ನೇಮಕ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಮನವಿ ಸ್ವೀಕರಿಸಿದ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ಅವರು, ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸಿ, ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷೆ ಕೆ. ನೀಲಾ, ಸಂಘದ ಜಿಲ್ಲಾ ಅಧ್ಯಕ್ಷೆ ಚಂದಮ್ಮ, ಕಾರ್ಯದರ್ಶಿ ಲೋಹಿತ, ಉಪಾಧ್ಯಕ್ಷ ಮರೆಪ್ಪ, ತೇಜಾಬಾಯಿ, ವೈಶಾಲಿ ಮತ್ತು ತಾಯಮ್ಮ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.