ಕಲಬುರಗಿ: ಬಚಾವತ್ ಆಯೋಗದ ಶಿಫಾರಸಿನಂತೆ ಮಹಾರಾಷ್ಟ್ರದ ಉಜನಿ ಅಣೆಕಟ್ಟಿನಿಂದ ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಲು ರಾಜ್ಯ ಸರ್ಕಾರ ಕೂಡಲೇ ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ನಗರದಲ್ಲಿ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದ್ದು, ಜನರು, ಜಾನುವಾರುಗಳು ಹಾಗೂ ಪ್ರಾಣಿ-ಪಕ್ಷಿಗಳು ನೀರಿಗಾಗಿ ಪರದಾಡುವಂತಾಗಿದೆ. ಆದ್ದರಿಂದ ಭೀಮಾ ನದಿಗೆ ತಕ್ಷಣ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿಪಡಿಸಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಬೆಂಬಲ ಬೆಲೆ ನೀಡಬೇಕು ಹಾಗೂ ಕಬ್ಬಿನ ಉಪ ಉತ್ಪನ್ನಗಳಿಂದ ದೊರೆಯುವ ಲಾಭದಲ್ಲಿ ರೈತರಿಗೆ ಶೇ. 50ರಷ್ಟು ಪಾಲು ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಕಬ್ಬಿನ ತೂಕ ಮತ್ತು ಸಕ್ಕರೆ ಇಳುವರಿಯಲ್ಲಿ ನಡೆಯುವ ಮೋಸವನ್ನು ತಡೆಗಟ್ಟಬೇಕು. ಕಬ್ಬಿನ ಕಟಾವು ಹಾಗೂ ಸಾಗಣೆ ವೆಚ್ಚವನ್ನು ಕಡಿಮೆ ಮಾಡಬೇಕು. ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ 900 ರೂ. ಹೆಚ್ಚುವರಿ ಬೆಲೆ ನೀಡುವಂತೆ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕರೆಪ್ಪ ಕರಗೊಂಡ, ದೇವು ಬಿರಾದಾರ, ಸಾಯಬಣ್ಣ ಕೊರಬಾ ಹಾಗೂ ಚಂದಪ್ಪ ಪೂಜಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor