Kalaburagi | ಪರವಾನಗಿ ಇಲ್ಲದೆ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ ದಂಡ : ರಾಯಪ್ಪ ಹುಣಸಗಿ
ಕಲಬುರಗಿ: ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅಗತ್ಯ ಪರವಾನಗಿ ಪಡೆಯದೆ ವ್ಯಾಪಾರ ನಡೆಸುವವರ ವಿರುದ್ಧ ಸ್ಥಳದಲ್ಲೇ ದಂಡ ವಿಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕ್ರಮಗಳು ಹಾಗೂ ಜಾಗೃತಿ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗ್ರಾಮ ಮಟ್ಟದ ತಂಬಾಕು ನಿಯಂತ್ರಣ ಸಮಿತಿಗಳನ್ನು ರಚಿಸಲಾಗಿದ್ದು, ಅಫಜಲಪುರದಲ್ಲಿ 99, ಚಿತ್ತಾಪುರದಲ್ಲಿ 62, ಕಲಬುರಗಿಯಲ್ಲಿ 28, ಸೇಡಂನಲ್ಲಿ 25 ಹಾಗೂ ಶಹಾಬಾದ್ನಲ್ಲಿ 14 ಸಮಿತಿಗಳು ಕಾರ್ಯಾರಂಭ ಮಾಡಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಜಿಲ್ಲೆಯ ಒಟ್ಟು 3,883 ಶೈಕ್ಷಣಿಕ ಸಂಸ್ಥೆಗಳ ಪೈಕಿ ಈವರೆಗೆ 1,713 ಶಾಲೆಗಳು ಮಾತ್ರ ನೋಂದಣಿಯಾಗಿವೆ. ನೋಂದಣಿಯಾಗದ ಉಳಿದ ಶೈಕ್ಷಣಿಕ ಸಂಸ್ಥೆಗಳು ಕೂಡಲೇ ನೋಂದಣಿ ಮಾಡಿಕೊಳ್ಳುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಯಿತು. ಇದೇ ವೇಳೆ, ಜಿಲ್ಲೆಯ 228 ಗ್ರಾಮ ಪಂಚಾಯಿತಿಗಳು ತಂಬಾಕು ಮುಕ್ತ ಗ್ರಾಮಗಳಾಗಿ ನೋಂದಣಿಯಾಗಿವೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ತಂಬಾಕು ಉತ್ಪನ್ನಗಳ ಮಾರಾಟ ಪರವಾನಗಿ ನವೀಕರಣದ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಪರವಾನಗಿ ನವೀಕರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು. ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವವರಿಗೆ 3,000 ರೂ. ರಿಂದ 4,000 ರೂ. ವರೆಗೆ ಸ್ಥಳದಲ್ಲೇ ದಂಡ ವಿಧಿಸುವ ನಿಯಮ ಜಾರಿಯಲ್ಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನವೆಂಬರ್ 4ರೊಳಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಗಳನ್ನು ನಡೆಸಿ, ಸಭೆಯ ನಡಾವಳಿಗಳನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾರ್ಮಿಕ ಇಲಾಖೆ ಹಾಗೂ ಸಿ.ಎಸ್.ಐ.ಯು. ಸಹಯೋಗದಲ್ಲಿ ಅಫಜಲಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಾರ್ಮಿಕರು ಮತ್ತು ಸಾರ್ವಜನಿಕರಿಗಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಫಜಲಪುರದಲ್ಲಿ ಎರಡು ಬೃಹತ್ ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಸಾಂಕ್ರಾಮಿಕವಲ್ಲದ ರೋಗಗಳ (ಎನ್ಸಿಡಿ) ಹಾಗೂ ಬಾಯಿಯ ಕ್ಯಾನ್ಸರ್ ತಪಾಸಣೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ನವೆಂಬರ್ ತಿಂಗಳಲ್ಲಿ ತಂಬಾಕು ಮುಕ್ತ ಯುವ ಅಭಿಯಾನ ಹಾಗೂ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜತೆಗೆ, ತಂಬಾಕು ನಿಯಂತ್ರಣ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ರಾಕೇಶ ಕಾಂಬಳೆ, ವಿಭಾಗೀಯ ಸಂಯೋಜಕ ಮಹಾಂತೇಶ್ ಬಿ. ಉಳ್ಳಾಗಡ್ಡಿ, ಜಿಲ್ಲಾ ಸಲಹೆಗಾರರಾದ ಸುಜಾತಾ ಪಾಟೀಲ, ಸಾಮಾಜಿಕ ಕಾರ್ಯಕರ್ತೆ ಆರತಿ ಧನಶ್ರೀ, ಜಿಮ್ಸ್ ಆಸ್ಪತ್ರೆಯ ತಂಬಾಕು ವ್ಯಸನಮುಕ್ತ ಕೇಂದ್ರದ ಮನೋವಿಜ್ಞಾನಿ ಹಾಗೂ ಸಮಾಲೋಚಕ ಮಂಜುನಾಥ ಕಂಬಾಳಿಮಠ, ಗಣಕಯಂತ್ರ ಸಹಾಯಕ ರವಿಕುಮಾರ್ ಪೂಜಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.