Kalaburagi | ಕಬ್ಬಿಗೆ 5,500 ರೂ. ಬೆಲೆ ನಿಗದಿಗೆ ಆಗ್ರಹಿಸಿ ಮುಂದುವರಿದ ರೈತರ ಹೆದ್ದಾರಿ ತಡೆ ಹೋರಾಟ
ಕಲಬುರಗಿ: ಕಬ್ಬಿಗೆ ಪ್ರತಿ ಟನ್ಗೆ 5,500 ರೂ. ಬೆಲೆ ನಿಗದಿಪಡಿಸುವುದು, ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವುದು ಹಾಗೂ ಕಬ್ಬು, ತೊಗರಿ ಮತ್ತು ಹತ್ತಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೆದ್ದಾರಿ ತಡೆ ಹೋರಾಟ ಮೂರನೇ ದಿನವಾದ ಗುರುವಾರವೂ ಮುಂದುವರಿದಿದೆ. ನಗರದ ಜೇವರ್ಗಿ ರಸ್ತೆಯ ಮಹರ್ಷಿ ಶ್ರೀ ವಾಲ್ಮೀಕಿ ವೃತ್ತದಲ್ಲಿ ಧರಣಿ ನಡೆಸಿದ ರೈತರು, ಬೇಡಿಕೆಗಳು ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವಿವಿಧ ರೈತ ಸಂಘಟನೆಗಳು, ಮಠಾಧೀಶರು, ಮಹಿಳೆಯರು, ವಕೀಲರು ಹಾಗೂ ಸಾರ್ವಜನಿಕರು ಬೆಂಬಲ ಸೂಚಿಸಿದರು. ಧರಣಿ ಸ್ಥಳಕ್ಕೆ ಭೇಟಿ ನೀಡಿದ ಮಠಾಧೀಶರು, ರೈತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ನಂದಿಕೂರ ಮತ್ತು ಸೀತನೂರ ಗ್ರಾಮದ ರೈತರು ಹತ್ತಾರು ಟ್ರ್ಯಾಕ್ಟರ್ಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ತಾರಫೈಲ್, ಭೂತಾಪುರ, ಚಿಂತಪಳ್ಳಿ, ರುದ್ರನೂರ, ಉಡಚಣ ಸೇರಿದಂತೆ ವಿವಿಧ ಗ್ರಾಮಗಳಿಂದ ರೈತರು ಆಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ವಕೀಲರಾದ ಜಾವೇದ್ ಮತ್ತು ಶಬ್ಬೀರ್ ಸೇರಿದಂತೆ ಕಾನೂನು ತಜ್ಞರೂ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು ಮಾತನಾಡಿ, ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು. ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಲೆ ನಿಗದಿಪಡಿಸುವುದು ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ನ್ಯಾಯ ದೊರೆಯುವವರೆಗೆ ಜಿಲ್ಲೆಯ ಮಠಾಧೀಶರು ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. 200ಕ್ಕೂ ಹೆಚ್ಚು ಮಠಾಧೀಶರು ಹೋರಾಟದಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ ಎಂದು ಅವರು ಘೋಷಿಸಿದರು.
ಕೆಸರಿ ಬೆಟ್ಟದ ಷ.ಬ್ರ. ತಪೋರತ್ನ ಬಾಲತಪಸ್ವಿ ದ್ವಿತೀಯ ಸಾಂಬಾ ಶಿವಾಚಾರ್ಯರೂ ಮಾತನಾಡಿ, ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಯುವ ಹೋರಾಟಗಾರ್ತಿ ಗುರುಬಾಯಿ ಸರಡಗಿ ಮಾತನಾಡಿ, ರೈತರ ಬೆವರು ಮತ್ತು ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. ಸಾಲದ ಹೊರೆ, ಕೃಷಿ ವೆಚ್ಚದ ಹೆಚ್ಚಳ ಹಾಗೂ ಬೆಳೆಗಳ ಬೆಲೆ ಕುಸಿತದಿಂದ ರೈತರು ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ತಾಳ್ಮೆಯನ್ನು ಪರೀಕ್ಷಿಸದೆ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಿದ್ದರಾಮ್ ಡಣ್ಣೂರು, ಯಾದಗಿರಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮುಷ್ಟೂರು, ಜಿಲ್ಲಾಧ್ಯಕ್ಷ ಜಗದೇಶ ಪಾಟೀಲ್ ರಾಜಾಪುರ, ಮಹಾದೇವಿ ಪೂಜಾರಿ, ಗುರುಬಾಯಿ ಸರಡಗಿ, ಅಶೋಕ್ ಹೂಗಾರ, ಬಸವರಾಜ ಚಾನಕೋಟೆ, ಎಂ.ಎಸ್. ಪಾಟೀಲ್ ನರಿಬೋಳ, ಶರಣಗೌಡ ಮಾಲಿಪಾಟೀಲ್, ಬಿ. ರೇಣುಕಾಚಾರ್ಯ, ಬಸವರಾಜ ಕೋರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ರೈತರ ಪ್ರಮುಖ ಬೇಡಿಕೆಗಳು :
ಕಬ್ಬಿಗೆ ಪ್ರತಿ ಟನ್ಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಕಬ್ಬಿಗೆ ಎಸ್ಎಪಿ (ರಾಜ್ಯ ಸಲಹಾ ಬೆಲೆ) ಮೂಲಕ ಕಾನೂನುಬದ್ಧ ಬೆಲೆಯ ಖಾತರಿ ನೀಡಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಕಲಬುರಗಿ ಜಿಲ್ಲೆಯ ತೊಗರಿಗೆ 1,600 ರೂ. ಎಂಎಸ್ಪಿ ನಿಗದಿಪಡಿಸಬೇಕು. ಹತ್ತಿಗೆ 1,500 ರೂ. ಬೆಂಬಲ ಬೆಲೆ ನೀಡಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಜೆಸ್ಕಾಂ ವ್ಯಾಪ್ತಿಯ ಕೃಷಿ ಪಂಪ್ಸೆಟ್ಗಳಿಗೆ ದಿನಕ್ಕೆ ಕನಿಷ್ಠ ಏಳು ಗಂಟೆ ವಿದ್ಯುತ್ ಪೂರೈಸಬೇಕು.