Kalaburagi | ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾದರೆ ಶಿಸ್ತುಕ್ರಮ : ಪಿ.ಟಿ.ಪರಮೇಶ್ವರ ನಾಯ್ಕ

Update: 2026-08-18 20:32 IST

ಕಲಬುರಗಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕರ್ತವ್ಯ ಲೋಪ ಅಥವಾ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಮಂಗಳವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 5,97,957 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಮೃತಪಟ್ಟಿರುವ 9,156 ಫಲಾನುಭವಿಗಳ ಪ್ರಕರಣಗಳಲ್ಲಿ ಈಗಾಗಲೇ 2.14 ಕೋಟಿ ರೂ. ವಸೂಲಿ ಮಾಡಿ ಸರ್ಕಾರಿ ಖಜಾನೆಗೆ ಜಮೆ ಮಾಡಲಾಗಿದೆ. ಬಾಕಿ ಇರುವ ಸುಮಾರು 2.12 ಕೋಟಿ ರೂ. ಮೊತ್ತವನ್ನು ತಕ್ಷಣ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಯುವನಿಧಿ ನೋಂದಣಿಗೆ ಜಾಗೃತಿ :

ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 32,943 ನಿರುದ್ಯೋಗಿಗಳು ನೋಂದಾಯಿಸಿಕೊಂಡಿದ್ದು, 32,289 ಪದವೀಧರರು ಸೇರಿದಂತೆ 15,690 ಮಹಿಳೆಯರು ಹಾಗೂ 17,253 ಪುರುಷರು ಇದ್ದಾರೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಅರ್ಹ ಯುವಜನರಿಗೆ ಯೋಜನೆಯ ಸೌಲಭ್ಯ ತಲುಪಿಸಬೇಕು ಎಂದರು.

10.50 ಲಕ್ಷಕ್ಕೂ ಅಧಿಕ ಗೃಹಜ್ಯೋತಿ ಫಲಾನುಭವಿಗಳು :

ಗೃಹಜ್ಯೋತಿ ಯೋಜನೆಯಡಿ ಜೆಸ್ಕಾಂ ವ್ಯಾಪ್ತಿಯಲ್ಲಿ 10.50 ಲಕ್ಷಕ್ಕೂ ಅಧಿಕ ಗ್ರಾಹಕರ ನೋಂದಣಿ ಪೂರ್ಣಗೊಂಡಿದೆ. ಪ್ರತ್ಯೇಕ ಮೀಟರ್ ಇಲ್ಲದ ಕಡೆಗಳಲ್ಲಿ ಹೊಸ ಮೀಟರ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 21.22 ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು 7 ಕೆ.ಜಿ. ಅಕ್ಕಿ ಹಾಗೂ 3 ಕೆ.ಜಿ. ಜೋಳ ವಿತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಿಂದ ಕೆಕೆಆರ್‌ಟಿಸಿ ಬಸ್‌ಗಳ ಲೋಡ್ ಫ್ಯಾಕ್ಟರ್ ಶೇ.85ಕ್ಕೆ ಏರಿಕೆಯಾಗಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 400 ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಉಚಿತ ಬಸ್ ಪಾಸ್ ಯೋಜನೆಯಡಿ ಜಿಲ್ಲೆಯಲ್ಲಿ 1,85,460 ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಬ್ಯಾಂಕ್ ಖಾತೆಗಳ ಎನ್‌ಪಿಸಿಐ ಮ್ಯಾಪಿಂಗ್, ಮತದಾರರ ಗುರುತಿನ ಚೀಟಿ ಹಾಗೂ ತೆರಿಗೆದಾರರೆಂದು ತಪ್ಪಾಗಿ ನಮೂದಾಗಿರುವ ಕಾರಣ ಗ್ಯಾರಂಟಿ ಯೋಜನೆಗಳ ಸೌಲಭ್ಯದಿಂದ ವಂಚಿತರಾಗಿರುವ ಬಡ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಪರಮೇಶ್ವರ ನಾಯ್ಕ ಸೂಚಿಸಿದರು.

ಇದೇ ವೇಳೆ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆ, ಸ್ವಚ್ಛತೆ ಕಾಪಾಡುವುದು ಹಾಗೂ ಶೌಚಾಲಯಗಳಿಗೆ ಏಕರೂಪದ ಶುಲ್ಕ ನಿಯಮ ಜಾರಿಗೊಳಿಸುವಂತೆ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶರಣಪ್ಪ ಸಂಕನೂರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ನಿರ್ದೇಶಕಿ (ಪ್ರಭಾರ) ಮದುಮತಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ವಿಜಯಕುಮಾರ ಕಟ್ಟಿಮನಿ, ಸೋಮಶೇಖರ ಹಿರೇಮಠ, ನರಸಿಂಹಲು ಕುಂಬಾರ, ನಿರ್ಮಲ ಬರಗಾಲೆ, ಸುರೇಶ ತಿಪ್ಪಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News