ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಬಿಡುಗಡೆ
ಕಲಬುರಗಿ: ಫೆ.16 ಮತ್ತು 17 ರಂದು ನಗರದ ಕನ್ನಡ ಭವನದ ಬಾಪೂಗೌಡ ದರ್ಶನಾಪೂರ ರಂಗಮಂದಿರದಲ್ಲಿ ಏರ್ಪಡಿಸಿರುವ ಕಲಬುರಗಿ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಗುರುವಾರ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಡಿ.ಸಿ ಅವರು, ಕನ್ನಡ ನಾಡು-ನುಡಿ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೈಭವವನ್ನು ಕಟ್ಟಿಕೊಡುವ ಸಮ್ಮೇಳನವು ಅರ್ಥಪೂರ್ಣವಾಗಿ ಜರುಗಲಿ, ಈ ಭಾಗದ ಇತಿಹಾಸ ಪರಂಪರೆ ಹಾಗೂ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಾಗಲಿ ಎಂದು ಶುಭ ಹಾರೈಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಶರಣರು, ಸೂಫಿ-ಸಂತರು ನಡೆದಾಡಿದ ನೆಲದ ಭವ್ಯ ಇತಿಹಾಸ ಪರಂಪರೆಯನ್ನು ಇಂದಿನ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವಂಥ ನಿಟ್ಟಿನಲ್ಲಿ ಸಮ್ಮೇಳನ ರೂಪಿಸಲಾಗಿದೆ. ಇದೇ ಮೊದಲ ಬಾರಿಗೆ ವಿಶೇಷ ಮತ್ತು ವಿಕಲಚೇತನರಿಂದ ಕವಿಗೋಷ್ಠಿ ನಡೆಯಲಿದೆ ಎಂದರು.
ಚಿತ್ರಕಲಾವಿದ ಮಹ್ಮದ್ ಅಯಾಜೋದ್ದಿನ್ ಪಟೇಲ್ ಅವರು ಸಿದ್ಧಪಡಿಸಿದ ಈ ಲಾಂಛನದಲ್ಲಿ ಕಾಳಗಿ ಕೋಟೆಯ ದ್ವಾರ ಬಾಗಿಲು ಮತ್ತು ರಾಷ್ಟ್ರಕೂಟರ ಕಲಾ ಶೈಲಿ, ಬೌದ್ಧ ಪರಂಪರೆಯನ್ನು ಬಿಂಬಿಸಲಾಗಿದೆ.
ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಚಿತ್ರಕಲಾವಿದ ಮುಹಮ್ದ್ಮದ್ ಅಯಾಜೋದ್ದಿನ್ ಪಟೇಲ್, ಜಿಲ್ಲಾ ಕಸಾಪ ದ ಕಾರ್ಯದರ್ಶಿ ದರ್ಮಣ್ಣ ಎಚ್.ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಾಧ್ಯಾಪಕ ಡಾ.ನಾಗರಾಜ ಹೆಬ್ಬಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.