ಕಲಬುರಗಿ | ಬಸ್-ಲಾರಿ ಮಧ್ಯೆ ಢಿಕ್ಕಿ : 8 ಮಂದಿಗೆ ಗಂಭೀರ ಗಾಯ
ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಎಂಟು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜೇವರ್ಗಿ ರಸ್ತೆಯ ಹಸನಾಪೂರ್ ಕ್ರಾಸ್ ಬಳಿ ಬುಧವಾರ ನಡೆದಿದೆ.
ಕಲಬುರಗಿಯಿಂದ ರಾಯಚೂರಿನತ್ತ ಹೊರಟಿದ್ದ ಕೆಕೆಆರ್‌ಟಿಸಿ ಬಸ್ ಹಸನಾಪೂರ್ ಕ್ರಾಸ್ ಸಮೀಪಕ್ಕೆ ತಲುಪುತ್ತಿದ್ದಾಗ, ಜೇವರ್ಗಿಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಲಾರಿಯೊಂದಿಗೆ ಮುಖಾಮುಖಿ ಢಿಕ್ಕಿಯಾಗಿದೆ. ಈ ವೇಳೆ ಬಸ್ಸಿನ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಕೂಡ ಬಸ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬಸ್‌ನಲ್ಲಿದ್ದ ಎಂಟು ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ರಕ್ಷಿಸಿ, ಜೇವರ್ಗಿ ಮತ್ತು ಕಲಬುರಗಿಯ ವಿವಿಧ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮ ಜೇವರ್ಗಿ–ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಪಘಾತಕ್ಕೊಳಗಾದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು.
ಈ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆ–1 ರಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.