×
Ad

ಕಲಬುರಗಿ | ಇಟಕಾಲ್‌ ಶಾಲೆಗೆ ಜಿಲ್ಲಾ ಪಂಚಾಯತ್ ಸಿಇಓ ಭೇಟಿ : ಎಸೆಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರಿಗೆ ಸೂಚನೆ

Update: 2026-01-30 17:10 IST

ಕಲಬುರಗಿ: ಸೇಡಂ ತಾಲೂಕಿನ ಇಟಕಾಲ್ ಸರಕಾರಿ ಪ್ರೌಢಶಾಲೆಗೆ ಗುರುವಾರ ಜಿಲ್ಲಾ ಪಂಚಾಯತ್‌ ಸಿ.ಇ.ಓ ಭಂವರಸಿಂಗ್ ಮೀನಾ ಅವರು ಭೇಟಿ ನೀಡಿ ಅರ್ಧ‌ಗಂಟೆಕ್ಕಿಂತ ಹೆಚ್ಚಿನ ಹೊತ್ತು 10ನೇ ತರಗತಿ ಮಕ್ಕಳೊಂದಿಗೆ ಕಳೆದಿದ್ದಲ್ಲದೆ ಕನ್ನಡ ವಿಷಯ ಬೋಧನೆ ಮಾಡುವ‌ ಮೂಲಕ ಕನ್ನಡ‌ ಮೇಷ್ಟ್ರಾಗಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಎಸೆಸೆಲ್ಸಿ ಪರೀಕ್ಷೆ ನಿಮ್ಮ ಜೀವನದ ಅತ್ಯಮೂಲ್ಯ ಘಟ್ಟವಾಗಿದ್ದು, ಸಮಯ ವ್ಯರ್ಥ ಮಾಡದೆ ಓದಿನತ್ತ ಹೆಚ್ಚು ಗಮನ ಹರಿಸಬೇಕು. ಕಾಲಹರಣ ಮಾಡದೆ ಸಮಯಕ್ಕೆ ಬೆಲೆ ಕೊಡಬೇಕು. ಅಂದಾಗ ಭವಿಷ್ಯದಲ್ಲಿ ಏನಾದರು ಸಾಧಿಸುವಿರಿ ಎಂದು ಮಕ್ಕಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.

ಇನ್ನು ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಸುಧಾರಣೆಯಾಗಬೇಕು. ಫಲಿತಾಂಶ ಹೆಚ್ಚಿಸಲು ಶಿಕ್ಷಕರು ಹೆಚ್ಚು ಮುತುವರ್ಜಿ ವಹಿಸಬೇಕು. ಮಕ್ಕಳ ಮೇಲೆ ವಿಶೇಷ ಗಮನ ಹರಿಸಬೇಕು ಎಂದರಲ್ಲದೆ "ಅರಿವೇ ಗುರು" ಪುಸ್ತಕದ ಮಹತ್ವ ಹಾಗೂ ಪರೀಕ್ಷೆಗೆ ಈ ಪುಸ್ತಕ ತುಂಬಾ ಉಪಯುಕ್ತವಾಗಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ನಂತರ ಅಕ್ಷರ ದಾಸೋಹ ಬಿಸಿಯೂಟ ಕೋಣೆಗೆ ಭೇಟಿ ನೀಡಿದ ಭಂವರ್ ಸಿಂಗ್ ಮೀನಾ ಅವರು, ಬೇಳೆ, ಅಕ್ಕಿ, ಹಾಲಿನ ಪುಡಿ, ರಾಗಿ, ಎಣ್ಣೆ ಹಾಗೂ ಇನ್ನಿತರ ಪದಾರ್ಥಗಳನ್ನು ಪರಿಶೀಲಿಸಿ ಮಕ್ಕಳಿಗೆ ನೀಡುವ ಬಿಸಿಯೂಟ ಗುಣಮಟ್ಟದಿಂದಿರಬೇಕು. ಪಾತ್ರೆಗಳ ನಿರ್ವಹಣೆ ಸರಿಯಾಗಿರಬೇಕು. ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಅಡುಗೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇ.ಓ ಚೆನ್ನಪ್ಪ ರಾಯಣ್ಣನವರ, ಬಿ.ಇ.ಓ ಮಾರುತಿ ಹುಜರತಿ ಸೇರಿದಂತೆ ಇತರೆ ಅಧಿಕಾರಿಗಳು, ಶಾಲೆಯ‌ ಮುಖ್ಯ ಗುರುಗಳು, ಶಿಕ್ಷಕರು, ಪಿ.ಡಿ.ಓ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News