Kalaburagi | ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರಿಗೆ ಕಸಾಪದಿಂದ ಸನ್ಮಾನ
ಕಲಬುರಗಿ: ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ನಗರದ ಕನ್ನಡ ಭವನಕ್ಕೆ ಆಗಮಿಸಿದ ಇಕ್ರಮ್ ಶರೀಫ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸನ್ಮಾನಿಸಿ, ಪರಿಷತ್ತಿನ ಕಾರ್ಯಕ್ರಮಗಳಿಗೆ ಸಹಕಾರ ಕೋರಿದರು.
ಇನ್ನೆರಡು ತಿಂಗಳಲ್ಲಿ ಕನ್ನಡ ಭವನದ ಅಂಗಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತಾಯಿ ಭುವನೇಶ್ವರಿ ಮೂರ್ತಿ ಉದ್ಘಾಟನೆ ಕುರಿತೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಪರಿಷತ್ತಿನ ಕನ್ನಡ ಚಟುವಟಿಕೆಗಳ ಕುರಿತು ವಿವರ ಒಳಗೊಂಡ ಪುಸ್ತಕವನ್ನು ಕಾಣಿಕೆಯಾಗಿ ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಇಕ್ರಮ್ ಶರೀಫ್, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಸಾಹಿತ್ಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹೆಮ್ಮೆಯ ಸಂಸ್ಥೆಯಾಗಿದೆ. ಕಸಾಪದ ಪ್ರತಿಯೊಂದು ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಕನ್ನಡ ಭಾಷೆಯ ಕೆಲಸಗಳಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.
“ಅನ್ಯ ಭಾಷೆಗಳು ಕನ್ನಡ ಭಾಷೆಯ ಮೇಲೆ ಹೆಚ್ಚು ಸವಾರಿ ಮಾಡುತ್ತಿದ್ದು, ಅವುಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಳೆದ ಅನೇಕ ದಶಕಗಳಿಂದ ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಅವಿರತವಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ವಿದ್ವಾಂಸರಿಗೆ ಸೀಮಿತವಾಗಿದ್ದ ಪರಿಷತ್ತು ಇಂದು ಸಮಾಜದ ಕಟ್ಟಕಡೆಯ ಜನರಲ್ಲೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಸಿದ್ಧಲಿಂಗ ಬಾಳಿ, ಡಾ. ರೆಹಮಾನ್ ಪಟೇಲ್, ಮಹಮದ್ ಅಯಾಜೋದ್ದಿನ್ ಪಟೇಲ, ದಿನೇಶ ಮದಕರಿ, ರಾಜಶೇಖರ ಶಾಮಣ್ಣ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಗಣೇಶ ಚಿನ್ನಾಕಾರ, ಪರಮಾನಂದ ಸರಸಂಬಿ, ರೇವಣಸಿದ್ಧ ಹೊಟ್ಟಿ, ಧರ್ಮರಾಜ ಜವಳಿ, ಸುನೀಲ ಹೂಗಾರ, ಶರಣು ವಸ್ತ್ರದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.