×
Ad

ಕಲಬುರಗಿ | ಇಲಿಗಳಿಂದ ಹಾನಿಗೊಳಗಾದ ವೈದ್ಯಕೀಯ ಔಷಧಿ ಕಿಟ್‌ಗಳು ಅಂಗನವಾಡಿಗಳಿಗೆ ಪೂರೈಕೆ: ಪೋಷಕರಲ್ಲಿ ಆತಂಕ!

Update: 2026-01-30 18:09 IST

ಕಲಬುರಗಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗುವ ವೈದ್ಯಕೀಯ ಔಷಧಿ ಕಿಟ್‌ಗಳು ಇಲಿಗಳಿಂದ ಕಚ್ಚಿ ಹಾನಿಗೊಂಡ ಸ್ಥಿತಿಯಲ್ಲೇ ಸರಬರಾಜು ಮಾಡಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಡ ಕುಟುಂಬಗಳ 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ನೀಡಬೇಕಾದ ಔಷಧಿ ಕಿಟ್‌ಗಳ ಪೊಟ್ಟಣಗಳನ್ನು ಇಲಿಗಳು ಕಚ್ಚಿ ಹಾಳು ಮಾಡಿರುವುದನ್ನೇ ಯಾವುದೇ ಪರಿಶೀಲನೆ ಇಲ್ಲದೆ ಅಂಗನವಾಡಿ ಕೇಂದ್ರಗಳಿಗೆ ರವಾನೆ ಮಾಡಲಾಗಿದೆ ಎಂಬುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಸರಕಾರದಿಂದ ಮಕ್ಕಳ ಕಲ್ಯಾಣಕ್ಕಾಗಿ ಪೂರೈಕೆ ಮಾಡಲಾಗುವ ಔಷಧಿ ಕಿಟ್‌ಗಳನ್ನು ಕಲಬುರಗಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ಗುರುವಾರ ಉತ್ತರ ವಿಧಾನಸಭಾ ಕ್ಷೇತ್ರದ ಮೆಕ್ಕಾ ಕಾಲೋನಿ ಸೇರಿದಂತೆ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಹಾನಿಗೊಂಡ ಸ್ಥಿತಿಯಲ್ಲೇ ಸರಬರಾಜು ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಮಾಹಿತಿ ಪ್ರಕಾರ, ವೈದ್ಯಕೀಯ ಕಿಟ್‌ಗಳನ್ನು ಸೂಕ್ತ ಸುರಕ್ಷತಾ ಕ್ರಮಗಳಿಲ್ಲದ ದುಸ್ಥಿತಿಯ ಗೋಡೌನ್‌ನಲ್ಲಿ ದೀರ್ಘಕಾಲ ಸಂಗ್ರಹಿಸಿಟ್ಟಿದ್ದ ಪರಿಣಾಮ, ಔಷಧಿಗಳ ಪೊಟ್ಟಣಗಳಿಗೆ ಇಲಿಗಳು ಕಚ್ಚಿ ಒಳಗಿನ ವಸ್ತುಗಳನ್ನು ಹೊರ ಚೆಲ್ಲಿವೆ. ಇಂತಹ ಕಿಟ್‌ಗಳನ್ನು ಯಾವುದೇ ಪರಿಶೀಲನೆ ನಡೆಸದೇ ನೇರವಾಗಿ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇಲಿ ಕಚ್ಚಿರುವ ಔಷಧಿ ಕಿಟ್‌ಗಳ ವಿತರಣೆಯಿಂದಾಗಿ ಪೋಷಕರಲ್ಲಿ ತೀವ್ರ ಆತಂಕ ಮೂಡಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News