ಕಲಬುರಗಿ : ಭ್ರಷ್ಟಾಚಾರವು ದೇಶದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪ್ರಮುಖ ಅಡಚಣೆಯಾಗಿದೆ. ಇದರ ನಿರ್ಮೂಲನೆಗೆ ಸರ್ಕಾರ, ನಾಗರಿಕರು ಮತ್ತು ಖಾಸಗಿ ವಲಯ ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕಿ ಡಾ. ರೂಕೀಯ ಆಸ್ನಾ ರಬಾ ಹೇಳಿದರು.

ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ನಾಗರಿಕರೂ ಜಾಗೃತರಾಗಿದ್ದು, ಜೀವನದ ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕಾನೂನಿನ ನಿಯಮಗಳನ್ನು ಪಾಲಿಸಬೇಕು. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸಕ್ರಿಯವಾಗಿ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಮಲ್ಲಪ್ಪ ಅವರು ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ಲಂಚ ಪಡೆಯುವುದಿಲ್ಲ, ನೀಡುವುದಿಲ್ಲ, ಎಲ್ಲ ಕಾರ್ಯಗಳನ್ನು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ನಿರ್ವಹಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡುತ್ತೇನೆ. ವೈಯಕ್ತಿಕ ನಡವಳಿಕೆಯಲ್ಲಿ ನಿಷ್ಠೆ ಪ್ರದರ್ಶಿಸುವುದರ ಜತೆಗೆ ಭ್ರಷ್ಟಾಚಾರದ ಘಟನೆಗಳು ಕಂಡುಬಂದಲ್ಲಿ ಸಂಬಂಧಿಸಿದ ಸಂಸ್ಥೆಗಳಿಗೆ ವರದಿ ಮಾಡುತ್ತೇನೆ ಎಂದು ಆಸ್ಪತ್ರೆಯ ಸಿಬ್ಬಂದಿ ಪ್ರತಿಜ್ಞೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಒಪಿಡಿ ಸರ್ಜನ್ ಡಾ. ಶಾಲಿನಿ ಸಜ್ಜನಶೆಟ್ಟಿ, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ. ಜಯಮ್ಮ ಎಸ್. ಗಣಜಲಖೇಡ್, ಡಾ. ಸಂತೋಷ ಕಟ್ಟಿಮನಿ, ಆಡಳಿತಾಧಿಕಾರಿ ಅಂಬಾರಾಯ ಸಂಕಾ, ಪ್ರಥಮ ದರ್ಜೆ ಸಹಾಯಕಿಯರಾದ ಕಾವ್ಯ ಅಂಜುಟಗಿ, ಶೀಬಾ ರಾಣಿ, ಜಿಲ್ಲಾ ತಂಬಾಕು ವ್ಯಸನಮುಕ್ತ ಕೇಂದ್ರದ ಮನೋವೈದ್ಯಕೀಯ ಸಲಹೆಗಾರ ಮಂಜುನಾಥ ಕಂಬಾಳಿಮಠ, ಗಣಕ ಸಹಾಯಕಿಯರಾದ ಪಾರ್ವತಿ ಭೀಮರಾವ್, ಸುರೇಖಾ ದಿವಟೆಗಿ ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor