ಕಲಬುರಗಿ: ಮಹಿಳೆಯರು, ಯುವಕರು ಸೇರಿದಂತೆ ವಿವಿಧ ವರ್ಗಗಳಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರಗಳು, ದೇಶದ ಬೆನ್ನೆಲುಬಾದ ರೈತರಿಗೂ ಅನುಕೂಲವಾಗುವಂತೆ ಕೃಷಿ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಆಗ್ರಹಿಸಿದರು.

ಸೇಡಂ ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನವ ಕರ್ನಾಟಕ ರೈತ ಸಂಘದ ವತಿಯಿಂದ ಆಯೋಜಿಸಿದ್ದ ರೈತ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರೈತರ ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ಕೃಷಿ ಸೌಲಭ್ಯಗಳ ಖಾತರಿಗಾಗಿ ಡಿ.12ರಿಂದ ಕಲಬುರಗಿಯಲ್ಲಿ ಮೂರು ದಿನಗಳ ಬೃಹತ್ ರೈತ ಸಮಾವೇಶ ಆಯೋಜಿಸಲಾಗುತ್ತಿದೆ. ರೈತರ ಸಮಸ್ಯೆಗಳು, ಸರ್ಕಾರದ ಧೋರಣೆ ಹಾಗೂ ಕೃಷಿ ಕ್ಷೇತ್ರದ ಸುಧಾರಣೆ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.

ತೊಗರಿ, ಕಬ್ಬು, ಜೋಳ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ರೈತರು ದಲ್ಲಾಳಿಗಳಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಸರ್ಕಾರವೇ ನೇರ ಖರೀದಿ ವ್ಯವಸ್ಥೆ ಕಲ್ಪಿಸಬೇಕು. ಕಾಲುವೆಗಳ ಅಭಿವೃದ್ಧಿ, ಗ್ಯಾಪ್ ಫಿಲ್ಲಿಂಗ್ ಹಾಗೂ ಹನಿ ನೀರಾವರಿ ಪದ್ಧತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ರೈತರ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ರೈತಪರ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಖರ್ಚು-ವೆಚ್ಚ ನಿರ್ವಹಿಸುವ ಮೂಲಕ ರೈತರ ಆರ್ಥಿಕ ನಷ್ಟವನ್ನು ತಡೆಗಟ್ಟಲು ಹಾಗೂ ತಜ್ಞರ ಮಾರ್ಗದರ್ಶನ ಒದಗಿಸಲು ಸಂಘಟನೆ ಶ್ರಮಿಸುತ್ತಿದೆ. ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಗಣ್ಯರ ಒಡನಾಟದಿಂದ ರೈತಪರ ಕಾಳಜಿ ಮತ್ತು ಅನುಭವಗಳನ್ನು ಪಡೆದಿರುವುದಾಗಿ ತಿಳಿಸಿದರು.

ಸಂಘದ ಕಾರ್ಯದರ್ಶಿ ಶಿವಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸಲು ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಬದಲಾವಣೆ ಅಗತ್ಯವಿದೆ. ರಾಜಕೀಯ ಪಕ್ಷ, ಜಾತಿ ಮತ್ತು ಧರ್ಮದ ಭೇದ ಮರೆತು ಎಲ್ಲರೂ ರೈತರ ಹಿತಕ್ಕಾಗಿ ಒಗ್ಗೂಡಬೇಕು ಎಂದರು.

ಕಾರ್ಖಾನೆಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ಹಾಗೂ ಕೃಷಿಯಲ್ಲಿ ಅತಿಯಾದ ಕೀಟನಾಶಕ ಬಳಕೆಯಿಂದ ಆಹಾರ ವಿಷಪೂರಿತವಾಗುತ್ತಿದೆ. ಕಡಿಮೆ ಭೂಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅನುಸರಿಸಬಹುದಾದ ಆಧುನಿಕ ಮತ್ತು ಪಾರಂಪರಿಕ ಕೃಷಿ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಸಮಾವೇಶದಲ್ಲಿ 250ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಿ ಸಾವಯವ ಕೃಷಿ, ಪಾರಂಪರಿಕ ಆಹಾರ ಪದ್ಧತಿ ಹಾಗೂ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಗುವುದು. ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಕೃಷಿ ಪದ್ಧತಿಯಲ್ಲಿ ಸಕಾರಾತ್ಮಕ ಬದಲಾವಣೆ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ದಿವ್ಯ ಹಾಗರಗಿ, ಭಗವಂತರಾವ ಪಾಟೀಲ ಕೊಂಕನಹಳ್ಳಿ, ಪರ್ವತರೆಡ್ಡಿ ಪಾಟೀಲ ನಾಮವಾರ, ವೆಂಕಟರೆಡ್ಡಿ ಪಾಟೀಲ ಮಾಧವಾರ, ರಾಜಶೇಖರ ನಿಲಂಗಿ, ಶಿವಲಿಂಗರೆಡ್ಡಿ ಪಾಟೀಲ ಬೆನಕನಹಳ್ಳಿ, ಮಲ್ಲಿಕಾರ್ಜುನ ಪಾಟೀಲ ಭೂತಪೂರ, ಭೀಮರಾವ ಪಾಟೀಲ, ಡಾ. ಶ್ರೀನಿವಾಸ ಮೊಕದ್ದಮ್, ನಾಗೇಂದ್ರಪ್ಪ ಪಾಟೀಲ, ಅಶೋಕ ಗುತ್ತೇದಾರ ಸೇರಿದಂತೆ ಸಂಘದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor