ಚಿಂಚೋಳಿ: ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ; ಅದು ವ್ಯಕ್ತಿತ್ವ ನಿರ್ಮಾಣದ ಶಕ್ತಿಯಾಗಿದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಛಲ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದಿಂದ ಎದುರಿಸಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಖಾಜಾವಲಿ ಈಚನಾಳ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026–27ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಸಮಿತಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೊಲೀಸ್ ಉಪನಿರೀಕ್ಷಕಿ ಯಶೋದಾ ಕಟಕೆ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಮತ್ತು ಪದವಿಗಳಿಗೆ ಸೀಮಿತವಾಗದೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರೀತಿ, ಸಹಬಾಳ್ವೆ, ಶಿಸ್ತು ಮತ್ತು ಮಾನವೀಯತೆಯ ಗುಣಗಳನ್ನು ಬೆಳೆಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಸವರಾಜ ಕೋನೇರಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಅನಾವರಣಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಸಂತೋಷ ಕಟಕೆ ಅವರು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್, ರೆಡ್‌ಕ್ರಾಸ್ ಸೇರಿದಂತೆ ವಿವಿಧ ಸಮಿತಿಗಳ ಉದ್ದೇಶ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಅವುಗಳ ಪಾತ್ರವನ್ನು ವಿವರಿಸಿದರು.

ಪ್ರೊ. ಪೀರಪ್ಪ ಸ್ವಾಗತಿಸಿದರು. ಪ್ರೊ. ಮಿರಾಜಪಾಶಾ ಹಸನಳ್ಳಿ ನಿರೂಪಿಸಿದರು. ವಿಶ್ವನಾಥ ವಂದಿಸಿದರು.

ಕಾರ್ಯಕ್ರಮದಲ್ಲಿ ಕಲ್ಯಾಣಮ್ಮ ಗುತ್ತೆದಾರ, ಅನ್ನಪೂರ್ಣ ಸೇಡಂಕರ, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor