Kalaburagi | ಅಮರ್ಜಾ ಅಣೆಕಟ್ಟಿನಿಂದ ನಾಲಾಕ್ಕೆ ನೀರು ಹರಿಸಲು ರೈತರ ಆಗ್ರಹ
ಕಲಬುರಗಿ: ಅಮರ್ಜಾ ಅಣೆಕಟ್ಟಿನಿಂದ ಕೆಳಭಾಗದ ನಾಲಾಕ್ಕೆ ನೀರು ಹರಿಸುವಂತೆ ಆಗ್ರಹಿಸಿ ನವ ಕರ್ನಾಟಕ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ದಯಾನಂದ ಪಾಟೀಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಅಮರ್ಜಾ ಅಣೆಕಟ್ಟಿನ ಕೆಳಭಾಗದಲ್ಲಿರುವ ಕೊರಳ್ಳಿ, ಭೂಸನೂರು, ನಿಂಬರ್ಗಾ, ದೇವಂತಿಗೆ, ದಂಗಾಪುರ, ಜವಳಿ(ಡಿ), ಬಟರಗಾ, ಹಿತ್ತಲ ಶಿರೂರು ಹಾಗೂ ಕುಡಿಕಿ ಗ್ರಾಮಗಳಲ್ಲಿ ಪಶುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರಸ್ತುತ ಕೆನಾಲ್‌ಗೆ ನೀರು ಹರಿಸಲಾಗುತ್ತಿದ್ದು, ದನಕರು ಹಾಗೂ ಕುರಿಗಳು ಕೆನಾಲಿಗೆ ಇಳಿದು ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆನಾಲ್‌ಗೆ ನೀರು ಬಿಡುವುದನ್ನು ಸ್ಥಗಿತಗೊಳಿಸಿ, ಕೆಳಭಾಗದ ನಾಲಾಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ನಾಲಾಕ್ಕೆ ನೀರು ಹರಿಸಿದರೆ ಪಶುಗಳಿಗೆ ಕುಡಿಯುವ ನೀರು ದೊರೆಯುವುದರ ಜೊತೆಗೆ ಕೆಳಭಾಗದ ರೈತರ ಬೋರ್‌ವೆಲ್ ಹಾಗೂ ಬಾವಿಗಳಿಗೂ ನೀರಿನ ಲಭ್ಯತೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಈ ಬೇಡಿಕೆಗೆ ಸ್ಥಳೀಯ ಶಾಸಕರಾದ ಬಿ.ಆರ್. ಪಾಟೀಲ್ ಹಾಗೂ ಎಂ.ವೈ. ಪಾಟೀಲ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೃಷಿಕ ಸಮಾಜದ ಅಧ್ಯಕ್ಷ ಡಾ. ಸಿದ್ದರಾಮಪ್ಪಾ ಪಾಟೀಲ್, ತಾಲೂಕು ಅಧ್ಯಕ್ಷ ಗುರುಗೌಡ ಪಾಟೀಲ್, ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗುರಗೌಡ ಪಾಟೀಲ್ ಹಾಗೂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಬಿ. ಶೇಗಜಿ ಅವರುಗಳೂ ಅಧಿಕಾರಿಗಳಿಗೆ ಪತ್ರ ಬರೆದು ರೈತರ ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ.
ರೈತರ ಹಾಗೂ ಪಶುಗಳ ಹಿತದೃಷ್ಟಿಯಿಂದ ತಕ್ಷಣವೇ ಅಮರ್ಜಾ ಅಣೆಕಟ್ಟಿನಿಂದ ಕೆಳಭಾಗದ ನಾಲಾಕ್ಕೆ ನೀರು ಹರಿಸಬೇಕು ಎಂದು ನವ ಕರ್ನಾಟಕ ರೈತ ಸಂಘವು ಪ್ರಾದೇಶಿಕ ಆಯುಕ್ತರನ್ನು ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಲಕ್ಷ್ಮಿಪುತ್ರ ಶೇಗಜಿ, ಸಂಜಯ ಆರ್.ಕೆ., ಪಂಡಿತ ಪೂಜಾರಿ, ಶಿವಾಜಿ, ಭೀಮಶಾ, ದುರ್ಗಪ್ಪಾ, ಪ್ರಕಾಶ ಸುತಾರ, ಮಂಜುನಾಥ ಧುತ್ತರಗಾಂವ, ಶ್ರೀಮಂತರಾವ ಪಾಟೀಲ ಸೇರಿದಂತೆ ಹಲವರು ಭಾಗವಹಿಸಿದ್ದರು.