Kalaburagi | ಅತ್ಯಾಚಾರ ಪ್ರಕರಣ : ಜನವಾದಿ ಮಹಿಳಾ ಸಂಘಟನೆ ಆಕ್ರೋಶ
ಪದ್ಮಿನಿ ಕಿರಣಗಿ
ಕಲಬುರಗಿ: ದೆಹಲಿಯ ಮಂಗಲ್ಪುರಿ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಿನಿ ಕಿರಣಗಿ, ದಿನದ ಕೂಲಿ ಕೆಲಸ ಮುಗಿಸಿಕೊಂಡು ಪ್ರೀತಂಪೂರ್ ಸ್ಲಂ ಪ್ರದೇಶದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ 30 ವರ್ಷದ ವಿವಾಹಿತ ಮಹಿಳೆಯನ್ನು ಬಸ್ ಚಾಲಕ ಮತ್ತು ನಿರ್ವಾಹಕರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮಾನವೀಯತೆಯನ್ನೇ ತಲೆತಗ್ಗಿಸುವಂತದ್ದು ಎಂದು ಹೇಳಿದ್ದಾರೆ.
ಮಹಿಳೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಮಯ ಕೇಳುವ ನೆಪದಲ್ಲಿ ಆಕೆಯನ್ನು ಬಸ್ಸಿನೊಳಗೆ ಎಳೆದೊಯ್ದು ದುಷ್ಕೃತ್ಯ ಎಸಗಿರುವುದು 2012ರ ನಿರ್ಭಯ ಪ್ರಕರಣವನ್ನು ನೆನಪಿಸುವಂತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಂಗ್ಲೋಯಿ ಮೆಟ್ರೋ ನಿಲ್ದಾಣದ ಬಳಿ ಬಸ್ಸು ನಿಲ್ಲಿಸಿ ಮಹಿಳೆಯನ್ನು ಹೊರಗೆ ತಳ್ಳಿಹೋಗಿರುವುದು ದುಷ್ಕರ್ಮಿಗಳ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಮತ್ತು ಹಿಂಸಾಚಾರ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಅತ್ಯಾಚಾರಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರ ಮತ್ತು ಅಧಿಕಾರಿಗಳು ಇಂತಹ ಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಪರಾಧಿಗಳಿಗೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಠಿಣ ಶಿಕ್ಷೆ ವಿಧಿಸಬೇಕು. ಜೊತೆಗೆ ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಪದ್ಮಿನಿ ಕಿರಣಗಿ ಆಗ್ರಹಿಸಿದ್ದಾರೆ.