×
Ad

ಕಲಬುರಗಿ| ಜಿಲ್ಲಾ ಕಸಾಪದಿಂದ ಪ್ರಥಮ ಕವಿ ಸಮ್ಮೇಳನ: ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ ಆಯ್ಕೆ

Update: 2026-05-13 19:12 IST

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೇ ಮಾಸಾಂತ್ಯಕ್ಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ಕವಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಕನ್ನಡ ಸಾರಸ್ವತ ಲೋಕ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದು, ಇಲ್ಲಿ ನಾಡು-ನುಡಿಯ ಸೇವೆಯಲ್ಲಿ ಹೃದ್ಭಾವಗಳನ್ನು ಅರ್ಪಿಸಿದವರು ಅನೇಕರಿದ್ದಾರೆ. ಈ ನೆಲದಲ್ಲಿ ಸರಿ ಸುಮಾರು ನಾಲ್ಕೈದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾರಸ್ವತ ಲೋಕದ ಸೇವೆ ಮಾಡುತ್ತಿರುವ ಹಿರಿಯ ಸಾಹಿತಿ, ಕವಿ ನರಸಿಂಗರಾವ ಹೇಮನೂರ ಅವರು ನಡುವಿನ ಅಪರೂಪದ ಕವಿಯಾಗಿದ್ದಾರೆ. ಹೇಮನೂರ ರವರು ತಮ್ಮ ವೃತ್ತಿಯೊಂದಿಗೆ ಬರವಣಿಗೆಯಲ್ಲಿಯೂ ತೊಡಗಿಕೊಂಡು ತಮ್ಮ ಭಾವಗಳ ಬುತ್ತಿಯನ್ನು ಕಟ್ಟಿಕೊಟ್ಟಿರುವ ಪ್ರೀತಿಯ ಕವಿಯಾಗಿ ಜನಮನದಲ್ಲಿ ನೆನಪಿಗೆ ನಿಲ್ಲು ವ್ಯಕ್ತಿತ್ವ ಇವರದ್ದಾಗಿದೆ. ಅಪ್ಪಟ ಸಗರನಾಡಿನ ಭಾಷೆಯ ಸೊಗಡು ಅವರ ಕಾವ್ಯಗಳಲ್ಲಿ ಗಟ್ಟಿಯಾಗಿ ನಿಂತುಕೊoಡಿದೆ.

ಪದವೀಧರರಾದ ಹೇಮನೂರ ಅವರು ಸಿಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ಅನೇಕ ವರ್ಷಗಳ ಕಾಲ ದೇಶದ ವಿವಿದೆಡೆ ಸೇವೆ ಸಲ್ಲಿ, ಆ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಸಾಹಿತ್ಯ, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

ಇಂದ್ಯಾಕ ಬಂದಿ, ನೆನಪು ನೂರು ನೂರು ತರಹ ಸೇರಿ ಅನೇಕ ಕವನಗಳು ರಚಿಸಿ, ಜ್ಯೋತಿ, ನೃಪತುಂಗನ ನೆಲದಿಂದ, ಮೌನಯಾನ, ವಿಶ್ವರಥ, ವಿಶ್ವರೂಪ, ಸಮರ್ಪಣೆ, ವಿಶ್ವದೊಡೆಯ , ಶತಕ ಕಂಡ ಶ್ರೀಮಠ ಇವು ಇವರು ಸಂಪಾದನೆ ಮಾಡಿರುವ ಕೃತಿಗಳಾಗಿವೆ. ಶ್ರೀ ವೀರಬ್ರಹ್ಮೇಂದ್ರ ಶ್ರೀಗಳ ಕಾಲಜ್ಞಾನ , ಹಿಂದಿ, ಉರ್ದು ಭಾಷೆಗಳಲ್ಲಿ ಬಂದ ನೂರಾರು ಶಾಯಿರಿ, ಗಜಲ್, ಕವನಗಳ ಭಾವಾನುವಾದ, ಹಿರಿಯ ಕವಿ ಗುಲ್ಜಾರ್ ರ ಸುಮಾರು 900 ಶಾಯರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಅಪರೂಪದ ಕವಿ ಹೇಮನೂರ ರವರಾಗಿದ್ದಾರೆ. 

ಹೇಮನೂರ ರವರು 1978 ರಿಂದ 1981ರವರೆಗೆ ಸೇಡಂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿದ್ದು, ಈ ಅವಧಿಯಲ್ಲಿ ಸೇಡಂನಲ್ಲಿ ಬೃಹತ್ ಸಾಹಿತ್ಯ ಸಮ್ಮೇಳನವೊಂದನ್ನು ನಡೆಸಿದ್ದರು. ಹೇಮನೂರ ಅವರು ಬದುಕಿನ 80 ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಅವರ ಇಡೀ ಬರಹಗಳನ್ನೊಳಗೊಂಡ ಮಂದಾರ ಎಂಬ ಸಮಗ್ರ ಸಾಹಿತ್ಯ ಸಂಪುಟ ಈ ವರ್ಷ ಬಿಡುಗಡೆಗೊಂಡಿದೆ.

ಜಿಲ್ಲಾ ಕಾರ್ಯಕಾರಿ ಸಮಿತಿಯ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ ಜಾವಳಿ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News