ಕಲಬುರಗಿ: ಕಲ್ಯಾಣ ಕರ್ನಾಟಕದ ಜನರಿಗೆ ಸಂವಿಧಾನಬದ್ಧವಾಗಿ ದೊರೆತಿರುವ 371(ಜೆ) ಕಲಂನ ಸಂಪೂರ್ಣ ಪ್ರಯೋಜನವನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಕಲ್ಯಾಣ ಕರ್ನಾಟಕ 371(ಜೆ) ಕಲಂ ಕಾನೂನು ತಿದ್ದುಪಡಿ ಹೋರಾಟ ಸಮಿತಿಯು ಸೆಪ್ಟೆಂಬರ್ 15ರಿಂದ ಕೆಕೆಆರ್‌ಡಿಬಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಸೈಬಣ್ಣ ಜಮಾದಾರ, ಸರ್ಕಾರ ಕಲ್ಯಾಣ ಕರ್ನಾಟಕದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವದಲ್ಲಿ 371(ಜೆ) ಕಲಂನಡಿ ದೊರೆಯಬೇಕಾದ ಹಕ್ಕುಗಳು ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಆರೋಪಿಸಿದರು.

371(ಜೆ) ಕಲಂ ಅನ್ನು ಕೇವಲ ಕೆಕೆಆರ್‌ಡಿಬಿ ಅನುದಾನಕ್ಕೆ ಸೀಮಿತಗೊಳಿಸಲಾಗುತ್ತಿದೆ. ಇದರಡಿ ಕಲ್ಯಾಣ ಕರ್ನಾಟಕದ ಜನರಿಗೆ ಉದ್ಯೋಗ, ಶಿಕ್ಷಣ, ನೇಮಕಾತಿ ಮತ್ತು ಸರ್ಕಾರಿ ನೌಕರರ ಮುಂಬಡ್ತಿಯಲ್ಲಿಯೂ ನ್ಯಾಯಯುತ ಅವಕಾಶಗಳು ದೊರೆಯಬೇಕು. ಆದರೆ ಈ ಕ್ಷೇತ್ರಗಳಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ನಮ್ಮ ಭಾಗದ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಐದು ವರ್ಷಗಳಿಂದ 371(ಜೆ) ಕಲಂ ಸಮರ್ಪಕ ಜಾರಿ ಹಾಗೂ ಸರ್ಕಾರಿ ನೌಕರರ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಸಾಕ್ಷ್ಯಾಧಾರಗಳೊಂದಿಗೆ ಮಾಹಿತಿ ನೀಡಲಾಗಿದೆ. ಆದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.

ಈ ಸಮಸ್ಯೆಗಳ ಪರಿಹಾರಕ್ಕಾಗಿ ಕಳೆದ ಹಲವು ವರ್ಷಗಳಲ್ಲಿ ಧರಣಿ ಸತ್ಯಾಗ್ರಹ, ಶವಯಾತ್ರೆ, ತಿಥಿ ಊಟ, ಪ್ರತಿಕೃತಿ ದಹನ, ಕೇಶಮುಂಡನೆ ಸೇರಿದಂತೆ ಹಲವು ರೀತಿಯ ಹೋರಾಟಗಳನ್ನು ನಡೆಸಲಾಗಿದೆ. ಆದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸೈಬಣ್ಣ ಜಮಾದಾರ ಆರೋಪಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆ ಹಾಗೂ 371(ಜೆ) ಉಪಸಮಿತಿಯನ್ನು ಕಲಬುರಗಿಗೆ ಸ್ಥಳಾಂತರಿಸಬೇಕು, ಕಲ್ಯಾಣ ಕರ್ನಾಟಕದ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ, ಕಳೆದ ಐದು ವರ್ಷಗಳಿಂದ ಬಾಕಿ ಇರುವ ಮುಂಬಡ್ತಿಗಳನ್ನು ತಕ್ಷಣ ನೀಡಬೇಕು, ಕೆಕೆಆರ್‌ಡಿಬಿಯಲ್ಲಿನ ಭ್ರಷ್ಟಾಚಾರದ ಕುರಿತು ನಡೆದಿರುವ ತನಿಖಾ ವರದಿಯನ್ನು ಕೂಡಲೇ ಬಿಡುಗಡೆಗೊಳಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಕಲಬುರಗಿಯಲ್ಲಿ ಪ್ರತ್ಯೇಕ ನ್ಯಾಯಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಯಶವಂತರಾವ ಸೂರ್ಯವಂಶಿ, ವಿಜಯ ಜಾಧವ, ವಿಜಯಕುಮಾರ, ಎಂ.ಡಿ. ಅಮನ್, ಸಂಜು ಹೋಡಲಕರ್, ಸಂತೋಷ ಪೂಜಾರಿ, ಪ್ರಕಾಶ ಪಟ್ಟೆದಾರ ಹಾಗೂ ಬಕ್ಕಪ್ಪ ಬೆಮಳಖೇಡ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor